ಅನುದಿನ ಕವನ-೫೦೮, ಕವಿ: ವೇಣು ಜಾಲಿಬೆಂಚಿ,ರಾಯಚೂರು, ಕಾವ್ಯ ಪ್ರಕಾರ: ಗಜಲ್

ಗಜ಼ಲ್

ನೀ ಎಷ್ಟಾದರೂ ತಿಳಿ,ತಿಳಿಯಬೇಕಾದದ್ದು ಬೇರೆಯೇ ಇದೆ
ನೀ ಎಷ್ಟಾದರೂ ತಿರಸ್ಕರಿಸು ಒಪ್ಪಬೇಕಾದದ್ದು ಬೇರೆಯೇ ಇದೆ

ದಿನಾ ಹಗಲು ರಾತ್ರಿ,ಒಂದೇ ರಸ್ತೆಯಿಂದ ಚಲಿಸುವುದಿಲ್ಲ
ನೀ ಎಷ್ಟಾದರೂ ಜೋಡಿಸು ಒಂದಾಗಬೇಕಾದದ್ದು ಬೇರೆಯೇ ಇದೆ

ದುಃಖಭರಿತ ಎದೆಯ ಕಥೆ ಬಹಳ ಕಹಿ,ಕೇಳಿಯೂ ನೀ ಏನು ಮಾಡಬಲ್ಲೆ
ನೀ ಎಷ್ಟಾದರೂ ಹೆಜ್ಜೆ ಇಡು ಗುರಿ ತಲುಪಬೇಕಾದದ್ದು ಬೇರೆಯೇ ಇದೆ

ಸಮುದ್ರದಲಿ ಈಜುವುದೂ,ಕಣ್ಣಿನ ತುಂಟಾಟ ಸೆರೆಹಿಡಿಯುವುದೂ ಒಂದೇ
ನೀ ಎಷ್ಟಾದರೂ ಬಲೆ ಬೀಸು ಗಾಳಕ್ಕೆ ಸಿಗಬೇಕಾದದ್ದು ಬೇರೆಯೇ ಇದೆ

ತಿಳಿಯಾದ ನೀರಿನೊಳಗೂ,ತಿಳಿಯಾಗದೆ ಉಳಿದ ಅವಶೇಷ ಈ ನರಜನ್ಮ
ಜಾಲಿ ನೀ ಎಷ್ಟಾದರೂ ಮುಳುಗೇಳು ದಾಟಬೇಕಾದದ್ದು ಬೇರೆಯೇ ಇದೆ

-ವೇಣು ಜಾಲಿಬೆಂಚಿ,ರಾಯಚೂರು.
*****