ಹೊಸಪೇಟೆಯಲ್ಲಿ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ: ಮಾನಸಿಕ ರೋಗಗಳ‌ ಬಗ್ಗೆ ಜಾಗೃತಿ ಅತ್ಯಗತ್ಯ -ಡಾ.ಸೋಮಶೇಖರ

ಹೊಸಪೇಟೆ, ಮೇ 24: ದೇಶದಲ್ಲಿ ಪ್ರತಿ ವರ್ಷ 60 ಲಕ್ಷ ಜನರು ಸ್ಕಿಜೋಫ್ರೀನಿಯಾ ಕಾಯಿಲೆಯಿಂದ ಬಳಲುತ್ತಿದ್ದು ಜಾಗೃತಿ ಅತ್ಯಗತ್ಯ ಎಂದು ತಜ್ಞ ವೈದ್ಯ ಡಾ.‌ಸೋಮಶೇಖರ್ ತಿಳಿಸಿದರು.
ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆಯ ಅಂಗವಾಗಿ ನಗರದ ಎಸ್.ಎಸ್.ಎ.ಎಸ್ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಐಕ್ಯೂಎಸಿ, ರೆಡ್ ಕ್ರಾಸ್ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಸಹಯೋಗದಲ್ಲಿ ಜರುಗಿದ ಕಾಯಿಲೆ‌ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ವಿಶೇಷ ಉಪನ್ಯಾಸ ನೀಡಿದರು.
ಸಾಮಾನ್ಯವಾಗಿ 15 ರಿಂದ 25 ವರ್ಷದ ಯುವ ಸಮೂಹ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜೆನಿಟಿಕ್, ವಾತಾವರಣ, ಕೌಟುಂಬಿಕ ಸಮಸ್ಯೆ ಗಳು, ವೈರಲ್ ಇನ್ವಫೆಕ್ಷನ್ ನಿಂದ ಕಾಯಿಲೆ ಬರುತ್ತದೆಯಾದರೂ ಸ್ಕಿಜೋಫ್ರೀನಿಯಾಕ್ಕೆ ಚಿಕಿತ್ಸೆ ಇದೆ ಎಂದು ಹೇಳಿದರು.
ಅತಿಯಾದ ಮೊಬೈಲ್ ಬಳಕೆ ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗಬಹುದು. ನಾಲ್ಕು ಗಂಟೆ ಮೊಬೈಲ್ ಬಳಸುವವರು ಅಡಿಕ್ಷನ್ ಗೆ ಒಳಗಾಗಿರುತ್ತಾರೆ ಎಂದರು.
7ರಿಂದ 8 ತಾಸು ನಿದ್ರೆ, ಧ್ಯಾನ ಆರೋಗ್ಯಕ್ಕೆ ಪೂರಕ ಎಂದು ಡಾ.‌ಸೋಮಶೇಖರ್ ಮಾಹಿತಿ ನೀಡಿದರು.


ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಟಿ ವೀರಭದ್ರಪ್ಪ ಮಾತನಾಡಿ ಯುವ ಸಮೂಹ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಫಲಿತಾಂಶವನ್ನು ಸಮಚಿತ್ತ, ಸಮಭಾವದಿಂದ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ.‌ನಟರಾಜ್ ಪಾಟೀಲ್ ಅವರು ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ದೇವಣ್ಣ ಉಪಸ್ಥಿತರಿದ್ದರು.


ಐಕ್ಯೂಎಸಿ ಸಂಚಾಲಕರೂ ಆಗಿರುವ ಆಂಗ್ಲ ವಿಭಾಗದ ಮುಖ್ಯಸ್ಥ ಡಾ. ಟಿ ಎಚ್ ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಆರೋಗ್ಯದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಸಮಾಜಶಾಸ್ತ್ರದ ಮುಖ್ಯಸ್ಥ ಗದಗೀಶ, ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕರಾದ ಮುರಳೀಧರ ಬಿ ಕೆ, ಸಿ.ಮಂಜುನಾಥ್, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.


ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಾಗಣ್ಣ ಕಿಲಾರಿ ವಂದಿಸಿದರು.


*****