ಎಡಬಿಡದೇ ಸುರಿದ ಹನಿಮಳೆಗೆ
ಗರ್ಭದೊಡಲಲಿ ಹಸಿರು ಚಿಗುರು
ಸಣ್ಣಗೆ ತೂಗಿ ತೆನೆ…
ಬಿಸಿಲ ಮಚ್ಚಿನಲಿ ಬೆತ್ತಲು ಬಯಲು
ಬೆಚ್ಚಗಿನ ಬೆಳಕ ತೋಳುಗಳಲ್ಲೀಗ
ಸುಖದ ಅಮಲು
ಮಳೆ ನಿಂತು ಥಂಡಿಗಾಳಿಯ ಚಳಿ ಬಿಡಿಸಿ
ಕೊಂಚಕೊಂಚವೇ ಬಿಸಿಯೇರಿಸುವ
ಬಿಸಿಲ ಹುಚ್ಚಿನ ಸುಖಸ್ಪರ್ಶಕೆ
ಮೈ ಕಾಯಿಸಿಕೊಂಡವಳ
ಹನಿಬೆವರ ಗಂಧದಲಿ ಅವನುಸಿರ
ಹಸುಗೂಸು ಹೊರಳುವ ಸದ್ದು…
ತೇವಜೀವದೊಳಗೊಂದು ಮೊಗ್ಗು
ಹೂವಾಗುವ ಸಂಭ್ರಮದ ಸೀಮಂತಕ್ಕೆ
ಎದೆಯಮೃತದ ಕೊಳ ತುಳುಕಿ
ಹಸಿಬಿಸಿ ಬಯಕೆಗಳಲ್ಲಿ ಹಡೆದ ಕೂಸು
ಆಹಾ! ಎಂಥಾ ಚಂದದ ಬೆಳಗು….!
ಅವನೂ ಇವಳೂ ಕೂಡಿ ಮೂಡಿದ ಬೆರಗು!
ಹೀಗೊಮ್ಮೆ ಮಳೆ ನಿಂತು
ಭೂಮಿ ಹಸಿರಾದ ಹೊತ್ತು….
-ಲಾವಣ್ಯ ಪ್ರಭ, ಮೈಸೂರು
*****