ವಿನಾಕಾರಣ ನಿನ್ನ ಒಡನಾಟ…..
ಈಗೀಗ ನಾನು ಸಿಗರೇಟನು
ಅರ್ಧಕ್ಕೆ ಸೇದಿ ಎಸೆಯುತ್ತೇನೆ
ನೀನು ಸೇದಬೇಕಾಗಿದ್ದ ಉಳಿದರ್ಧವನು
ನಿನಗಾಗಿ ಉಳಿಸಿದ್ದೇನೆ
ನಿನ್ನ ಒಡನಾಟ
ವಸಂತ ಸ್ಮೃತಿ ಯಾಗಿ
ಸಂದು ಹೋಗುವ ಕಾಲ
ಸನಿಹವಾಗುತ್ತಿದೆ ಗೆಳೆಯಾ
ಮತ್ತೆ ಅರಳುವುದಿಲ್ಲ
ನಂಬಿಕೆಯ ಸೂರ್ಯ
ಸಿಳ್ಳು ಹಾಕುವುದಿಲ್ಲ
ಉಲ್ಲಾಸದ ಹಕ್ಕಿ
ಚಂದಿರನ ನಗುವೆಂಬುದು
ಚಿನಿವಾರನ ತಕ್ಕಡಿಯಾಗ..
.. ಆ ಹೊತ್ತು
ವಿನಾಕಾರಣ
ಬೇಸರದ ಆಗಸವ ಹೊತ್ತು
ಎಲ್ಲಿಗೆ ಹೋಗುವೆ?
ಆ ಹೊತ್ತು
ನೆತ್ತಿಯ ಮೇಲೆ ತೂಗುವುದು
ಕೇವಲ ವಿಷಾದ ತುಂಬಿದ ಪರಿತ್ಯಕ್ತ
ಬೂದು ಆಕಾಶವೆಂದುಕೊಳ್ಳಬೇಡ ಗೆಳೆಯಾ
ಸುಟ್ಟು ಭಸ್ಮವಾಗುತ್ತಿರುವ
ನನ್ನ ನಿನ್ನ ಹೇಸಿಗೆಯ ಕ್ಷಣ
ಮತ್ತೆ ಮರಣದಂಡನೆಗೆ ಒಳಗಾದ ಖೈದಿಯಂತೆ
ಸ್ನೇಹದ ಪುನರ್ ನವೀಕರಣಕ್ಕಿರುವ
ಕೊನೆಯ ಅವಕಾಶ!
– ಆರಿಫ್ ರಾಜಾ