ಜನಕವಿ ಡಾ.ಸಿದ್ದಲಿಂಗಯ್ಯ ಅವರು ಇಹಲೋಕ ತ್ಯಜಿಸಿ ಜೂ. 11ಕ್ಕೆ ಒಂದು ವರ್ಷವಾಯ್ತು. ನಾಡಿನಾದ್ಯಂತ ಪ್ರೀತಿಯ ಕವಿಗಳನ್ನು ಸ್ಮರಿಸಲಾಗುತ್ತಿದೆ. ಮೊದಲ ವರ್ಷದ ಪರಿ ನಿರ್ವಾಣದ ಹಿನ್ನಲೆಯಲ್ಲಿ ಕವಿ ಜಿ.ಶಿವಕುಮಾರ್ ಅವರು ‘ಮತ್ತೆ ಬರಲಿ ಮರೆಯಾದ ದಿನಗಳು’ ಕವಿತೆ ರಚಿಸುವ ಮೂಲಕ ನಾಡೋಜ ಡಾ.ಸಿದ್ದಲಿಂಗಯ್ಯ ಅವರಿಗೆ ನಮನ ಸಲ್ಲಿಸಿದ್ದಾರೆ. ಕರ್ನಾಟಕ ಕಹಳೆ ಡಾಟ್ ಕಾಮ್ ಕೂಡಾ ಗೌರವ ನಮನ ಸಲ್ಲಿಸುತ್ತಿದೆ…🙏🙏
👇
ಮತ್ತೆ ಬರಲಿ ಮರೆಯಾದ ದಿನಗಳು
ಗೌತಮ ಹುಟ್ಟಿದ ನಾಡಲ್ಲಿ
ಉಚ್ಚ ನೀಚ, ಮೇಲು ಕೀಳಿನ
ಮೋಹ, ಮದ, ಮತ್ಸರಗಳ
ಅಂಧಕಾರದ ಮೌಢ್ಯಗಳಿಗೆ ದಾಸರಾದ
ಮಂದಬುದ್ಧಿಯ ಜನರ ಕಂಡು
ಮಮ್ಮಲ ಮರುಗಿ
ಗೌತಮ ಬುದ್ಧನಾಗಿ
ಬೋದಿಸಿದ ಮಂತ್ರ ದೂರ
ಕಡಲಾಚೆ ಸರಿಸಿದಾಗ
ಕಳೆದೇ ಹೋದವು ದಿನಗಳು
ಎನ್ನುವಂತಾದಾಗ…
ಹುಟ್ಟಿದನಾ ಶ್ರಮಿಕರ ಪಾಲಿಗೆ
ಅಣ್ಣನಾಗಿ ಬಸವಣ್ಣ
ಪರಿವಾರ ಕಟ್ಟಿ ನಾಡಿಗೆ ಉಣಬಡಿಸಿದನಾ
ಅನುಭವ ಮಂಟಪದ ಪಾಠ
ಕಲಿಯದ ಜನರ ಕಂಡು
ಕಳೆದೇ ಹೋದವು ದಿನಗಳು
ಎನ್ನುವಂತಾದಾಗ…
ಪಣತೊಟ್ಟು ಎಲ್ಲ ಅಸಮಾನತೆಗಳ
ಮೆಟ್ಟಿಬಂದನಾ
ಅಂಬೇವಾಡಿಕರ ಅಂಬೇಡ್ಕರರಾಗಿ
ಪರಕೀಯ ಕಪ್ಪುಜನರ ಪರ ನಿಂತ
ಮಹಾತ್ಮನ ರಾಮನಾಮ ಅಸಹಾಯಕ
ಅಸ್ಪೃಶ್ಯರ ಹೊಟ್ಟೆ ಹೊರೆಯದೆಂದರಿತು
ಕಟ್ಟಿದನಾ ನಾಡಿಗೆ ಕಟ್ಟಕಡೆಯ
ಕಪ್ಪು ಜನರ ಸಮಪಾಲು ಸಮಬಾಳು
ಬೀಜಮಂತ್ರದ ಭವ್ಯಕೋಟೆ
ಒಳಗೆ ಇಲಿ ಹೆಗ್ಗಣಗಳು ಕುಳಿತು
ಲೋಕದ ಗೊಡವೆಯ ಆಲಿಸದೆ
ದರ್ಪದಿ ದರ್ಭಾರ್ ನಡೆಸುತ್ತಿರುವಾಗ
ಕಳೆದೇ ಹೋದವು ದಿನಗಳು
ಎನ್ನುವ ಹೊತ್ತಿಗೆ…
ದೊಡ್ಡೇಗೌಡರ ಬಾಗಿಲಿಗೆ
ನಮ್ಮ ಮೂಳೆಯ ತ್ವಾರಣ
ನಲವತ್ತೇಳರ ಸ್ವಾತಂತ್ರ್ಯ
ಯಾರಿಗೆ ಬಂತು ಎಲ್ಲಿಗೆ ಬಂತು ಎಂದು ಪ್ರಶ್ನಿಸಿ
ಗುಡಿಸಲುಗಳು ಗುಡುಗುತ್ತಿವೆ
ಬಂಗಲೆಗಳು ನಡುಗುತ್ತಿವೆ ಎಂದು
ಕ್ರಾಂತಿಯ ದೀಪ ಹೊತ್ತಿಸಿದ
ಚೈತನ್ಯದ ಚಿಲುಮೆಯೆ
ಮೊಳಗುತ್ತಲೇ ಇರಲಿ
ಸಮಸಮಾಜ ನಿರ್ಮಾಣವಾಗುವವರೆಗೆ
ನಿಮ್ಮ ಕ್ರಾಂತಿಯ ಕಹಳೆ
ಇದೋ ನಿಮಗೆ ಭೀಮ ಕ್ರಾಂತಿಯ ನಮನಗಳು
-ಜಿ.ಶಿವಕುಮಾರ್,
ಕನ್ನಡ ವಿವಿ, ಹಂಪಿ
*****