ಆರ್ದ್ರತೆ
ಕಂಪಿಸುತಿದೆ ಕಣ್ಣೋಟ
ಎವೆಯಿಕ್ಕದೆ ನನ್ನವನು
ನೋಡುವ ಆ ಪರಿಗೆ
ಮಂಜಾಗಿದೆ ದೃಷ್ಟಿ ಕಾಣದೇನನ್ನೂ
ಕಂಗಳು ತುಂಬಿ ಕಂಬನಿಯ
ಹೊತ್ತು ನಿನ ಕಾಣುವ ಕಾತುರಕೆ
ಬೇಯುತಿಹೆನು ಮುಂಗಾರಿನ
ಸಿಡಿಲಿನ ಉರಿಗೆ
ಮಳೆ ಹನಿಗೂ ಆರುತಿಲ್ಲ
ವಿರಹದ ಬೇಗೆ
ತಂಗಾಳಿಯಲ್ಲಿಯೂ ಹಿತವೆನಿಸದು
ಬೇಸಿಗೆಯ ಧಗೆಯ ಈ ಬಗೆ
ಇರಲಾರೆನು ಒಬ್ಬಳೇ
ನನಗಿದೋ ನೀ ಕೊಟ್ಟ ಸಜೆ
ಗಾಳಿ ಗಂಧ ಹೊತ್ತು ತರುತಿದೆ
ನಿನ್ನಿರುವಿಕೆಯ ಸುವಾರ್ತೆ
ಕೇಳಿ ನಾನಾದೆನು ಗರಿಬಿಚ್ಚಿ
ಕುಣಿವ ಮಯೂರನ ಸಜ್ಜಿಕೆ
ತುಂತುರಿನ ಸಿಂಚನದಲ್ಲೂ
ಇಲ್ಲ ಕಚಗುಳಿಯ ಬಯಕೆ
ಮುದಗೊಳ್ಳದ ಮನವಿದು
ತುಡಿಯುತಿದೆ ಸಂತೃಪ್ತ ಸ್ನೇಹಕ್ಕೆ
ಮುದುಡಿ ಮಲಗಿಹುದು
ಹಾಸದಲ್ಲಿ ಮನವಿದು ಹರಡಲಾಗದೆ
ಮಳೆ ನಿಂತಾಗಲೂ ಕಾಡಿದೆ
ಅರೆಝಳದ ಬೇಸರದ ಭಾವಕೆ
ಮನ್ನಡೆಯಲಾಗದೆ ತೆಡೆಯುತ್ತಿದೆ
ತೊಡರುತಿರುವ ನಿರಿಗೆ
ಮನವ ಕಲಕುತಿದೆ ಕಲುಷಿತಗೊಳಿಸಲು
ಗೊಂದಲವು ತಿಳಿಮನದ ಕೊಳಕೆ
-ಡಾ. ನಾಗರತ್ನ ಅಶೋಕ ಭಾವಿಕಟ್ಟಿ,
ಹುನಗುಂದ
*****