ನಾವು ಹೀಗೆ…..! 👉ಸಿದ್ಧರಾಮ‌ ಕೂಡ್ಲಿಗಿ

ನಾವು ಹೀಗೇ…………..👇

1. ಮದುವೆ ಮನೆಯಲ್ಲಿ ಮದುಮಕ್ಕಳಿಗೆ ಹಾರೈಸುವ ಮುನ್ನ ಊಟದ ಸ್ಥಳವನ್ನು ಹುಡುಕಾಡಿ ನುಗ್ಗುತ್ತಿರುತ್ತೇವೆ.
2. ಕೆಂಪು ದೀಪದ ಸಿಗ್ನಲ್ ಕಾಣುತ್ತ ಇದ್ದರೂ ಹಿಂದಿನಿಂದ ಜೋರಾಗಿ ಹಾರ್ನ್ ಹಾಕುತ್ತಿರುತ್ತೇವೆ.
3. ಎದುರಿಗೆ ಸಿಕ್ಕವರು ಯಾವ ಅವಸರದ ಕೆಲಸವಿರುವುದೋ ಎಂಬುದನ್ನೂ ಗಮನಿಸದೆ ಕೇಳದೆ ಗಂಟೆಗಟ್ಟಲೆ ಕೊರೆಯುತ್ತೇವೆ.
4. ಪಕ್ಕದಲ್ಲಿದ್ದವರಿಗೆ ನಮ್ಮ ಮಾತಿನಲ್ಲಿ ಆಸಕ್ತಿ ಇದೆಯೋ ಇಲ್ಲವೋ ನಮ್ಮ ಹಾಗೂ ಕುಟುಂಬದ ಬಗ್ಗೆ ಹೇಳ್ತಾನೇ ಇರ್ತೇವೆ.
5. ಬೇರೆಯವರಿಗೆ ನಾವು ಕಾಲ್ ಮಾಡಿದಾಗ ಆಚೆ ಇರುವವರು ಕೆಲಸದಲ್ಲಿದ್ದಾರೋ, ಇಲ್ಲವೋ ವಿಚಾರಿಸದೆ ಆರಾಮವಾಗಿ ಮಾತನಾಡುತ್ತಲೇ ಇರುತ್ತೇವೆ.
6. “ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಅದೇ ನಿಜವಾದ ದಾನ” ಎಂದು ಹೇಳುತ್ತಲೇ ನಾವು ಎಲ್ಲೆಲ್ಲಿ ಎಷ್ಟೆಷ್ಟು ಕೊಟ್ಟೆವು ಎಂಬ ಪಟ್ಟಿ ಹೇಳುತ್ತಿರುತ್ತೇವೆ.
7. ದೇಶದ, ರಾಜ್ಯದ ರಾಜಕೀಯ ಕೆಟ್ಟುಹೋಯ್ತು ಅಂತ ಬೈಯುತ್ತಲೇ ಮತ್ತೆ ಮತ್ತೆ ಅಂಥವರಿಗೇ ಮತವನ್ನು ಹಾಕುತ್ತಿರುತ್ತೇವೆ.
8. ಪ್ರತಿದಿನವೂ ಬೇರೆಯವರಿಗೆ ಅತ್ಯಂತ ಉತ್ತಮ ಸಂದೇಶಗಳನ್ನು ಕಳಿಸುತ್ತೇವೆ, ನಾವು ತದ್ವಿರುದ್ಧವಾಗಿರುತ್ತೇವೆ.
9. ಭ್ರಷ್ಟಾಚಾರದ ಬಗ್ಗೆ ವೇದಿಕೆಯಲ್ಲಿ ರೋಷಾವೇಶದಿಂದ ಮಾತನಾಡುತ್ತೇವೆ, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಯನ್ನೇ ಸುರಿಸುತ್ತೇವೆ, ಕುಟುಂಬದ, ವೈಯಕ್ತಿಕ ಕೆಲಸಗಳಿದ್ದಾಗ ಶಿಫಾರಸು, ಲಂಚ ಕೊಡಲು ಹೋಗುತ್ತೇವೆ.
10. ನನ್ನನ್ನು ಹೊರತುಪಡಿಸಿ ಉಳಿದವರೆಲ್ಲರೂ ಕೆಟ್ಟವರು ಎಂದೇ ನಂಬಿರುತ್ತೇವೆ, ನಂಬಿಸಿಕೊಳ್ಳುತ್ತೇವೆ.
11. ನಮಗೂ ಮುಂದೇ ಅದೇ ಸ್ಥಿತಿ ಬರುತ್ತದೆ ಎಂದು ಗೊತ್ತಿದ್ದೂ ವಯಸ್ಸಾದವರ ಬಗ್ಗೆ ಕೆಟ್ಟದಾಗಿ ಗೇಲಿ ಮಾಡಿ ನಗುತ್ತೇವೆ.


-ಸಿದ್ಧರಾಮ ಕೂಡ್ಲಿಗಿ