ಅನುದಿನ‌ ಕವನ-೫೩೦, ಕವಯತ್ರಿ: ಮಮತಾ ಅರಸೀಕೆರೆ, ಕವನದ ಶೀರ್ಷಿಕೆ: ಯಾವ ಕಂಪನದ ಉನ್ಮಾದ ತುಂಬಲಿ?

ಯಾವ ಕಂಪನದ ಉನ್ಮಾದ ತುಂಬಲಿ?

ಈಗಷ್ಟೆ ಹಬ್ಬಿದ ಬಳ್ಳಿಯಲ್ಲಿನ
ಎಳೆಯ ಮೊಗ್ಗೊಂದು ಹಸನಾಗಿ
ಬಿರಿಯಲು ಅನುಮತಿ ಕೇಳುತ್ತಿದೆ

ನೆಲದ ಅಂತಃಕರಣ ಹೊತ್ತು
ಚಿಮ್ಮಲು ಅನುವಾಗಿರುವ ಕಾರಂಜಿ
ಪುಟಿಯಲು ಕಾಯುತ್ತಿದೆ

ಗೂಡಿನ ಮರೆಯಲ್ಲಿ ಅಡಗಿದ್ದ
ಮೊಟ್ಟೆಗಳು ಅರಳಿ ನವಿರಾಗಿ
ಕಣ್ತೆರೆಯಲು ಯಾಚಿಸುತ್ತಿವೆ

ಆವರಿಸಿದ್ದ ಚಂದ್ರನ ಬಿಸುಪು
ಆಲಿಂಗನದಿಂದ ಮೆಲ್ಲನೆ ಸರಿಯುತ್ತ
ಕಿರಣಗಳು ಬಿಳಿಬಾಹುಚಾಚಲು
ಸಮಯದನುಸಂಧಾನ ಕೋರುತ್ತಿವೆ

ಬೀಜದಾವರಣ ಸೀಳಿ ಹೊರಬಂದು
ಹಸಿರು ಹೊನ್ನಿನ ಘಮಲು ಹರಡಲು
ಎಳ್ಳುಜೀರಿಗೆಗೆ ಇನ್ನಿಲ್ಲದ ತವಕ

ಹಕ್ಕಿಗೆ ರೆಕ್ಕೆ ಪೂರ ಕಸುವು ತುಂಬಲು
ದನಿಗೆ ಮಾರ್ದವತೆಯನ್ನ ಆಹ್ವಾನಿಸಲು
ತಣಿಯದ ಅನುಗಾಲದ ನಿರೀಕ್ಷೆ

ದೇಹವೆಲ್ಲ ಮಿಡಿದು ನಾದ ಹೊಮ್ಮಿಸುವ
ಸಂಗೀತ ಸುಸ್ವರದ ನವತಂತಿ ಜಾಲಕ್ಕೆ
ಮೈಮರೆವ ಆಲಾಪನೆಯ ತುಡಿತ

ಹೇಳು ನಿಯತಿ ಜ್ವಲಿಸುವ ಜೀವಂತ
ಈ ಭೂಮಿ ಕಡಾಯಿಗೆ ಜೀವ ಚೈತನ್ಯ
ಆವಾಹಿಸಿಕೊಳ್ಳಲು ಹೇಗೆ ಹೇಳಲಿ?
ಯಾವ ಉನ್ಮೇಷ ಭರವಸೆಯ
ದನಿವಾಗ್ಧಾನ ನೀಡಲಿ

-ಮಮತಾ ಅರಸೀಕೆರೆ
*****