ಕೆಂಪುಗುಲಾಬಿ
ಅರಳುವ ಮುನ್ನವೇ ಸೆಳೆಯುತಲಿದೆ
ಕಂಪನು ಬೀರುತಿಹ ಕೆಂಪುಗುಲಾಬಿ
ಅರೆಬಿರಿದು ನಾಚುತ ನಗುತಲಿದೆ
ಅಚ್ಚ ಹಸುರೆಲೆಗಳ ಇಕ್ಕೆಲದಲಿ
ಜಗದ ಒಲುಮೆಯೇ ಬಳಿಯಿರಲು
ರಂಗಾಗಿ ರಂಜಿಸಿದೆ ಹೊಳಪಿನಲಿ
ಸುಮದ ಎಸೆಳುಗಳ ಸುರುಳಿಯಲಿ
ಸುಮಧುರ ಪನ್ನೀರ ಚೆಲ್ಲುತಲಿದೆ
ಕುಸುಮರಾಶಿಯಲಿ ಮೆರುಗು ತಂದಿದೆ
ಬೀಸುತಿಹ ಮಂದಾನಿಲದ ಮಧುರತೆಯಲಿ
ಚಿತ್ತಾಕರ್ಷಿಸುತ ಮುದ ನೀಡುತಿದೆ
ಒಡನಾಡಿಯಾಗಿ ಮುಳ್ಳುಗಳ ಸನಿಹದಲಿ
ಹಿಮದ ಮಣಿಗಳ ಸಾಲುಗಳಿರಲು
ಮುಂಜಾವಿನಲಿ ನಗೆ ಸೂಸುತಿದೆ
ಸಿದ್ಧವಿಹ ಪಕಳೆಗಳು ವಿಕಸಿಸಲು
ಇಳೆಯ ಸೌಂದರ್ಯವು ಮಡಿಲಲ್ಲಿದೆ
ಪ್ರೇಮ ಸುಧೆಯ ಸಂಕೇತವಿದು
ಹರಿದಾಡುವುದು ಕವಿ ಲೇಖನಿಯಲಿ
ರಸಿಕರ ಮನದ ರಾಣಿಯಾಗಿಹುದು
ಘಮ ಘಮಿಸಿದೆ ಚೆಲುವಿನಲಿ
ಸೃಷ್ಟಿಯಲಿ ಪ್ರೀತಿಯು
ಸಮಷ್ಟಿಯಾಗಿಹ
ಬೆಡಗಿನ ಚಿತ್ತಾರದ ಸುಮವಿದು
ಪದ ಗುಚ್ಛದಲಿ ಬಣ್ಣಿಸಲಸದಳ
ನಯನ ಮನೋಹರ ಚೆಂಗುಲಾಬಿಯಿದು.
-ಡಾ. ಸೌಗಂಧಿಕಾ. ವಿ ಜೋಯಿಸ್, ನಂಜನಗೂಡು
*****
ಕವಿತೆ ಸೊಗಸಾಗಿದೆ 🌹.