🌺💐ಎಲ್ಲರಿಗೂ ವಿಶ್ವ ಅಪ್ಪಂದಿರ ದಿನಾಚರಣೆಯ ಶುಭಾಶಯಗಳು…..🌺💐
ಬರಲಾರದ ಅಪ್ಪ
ಗಾಯಗಳೇನೋ ವಾಸಿಯಾಗುತ್ತವೆ
ಉಳಿಸಿಹೋದ ಕಲೆಗಳು ?
ದೂರುವುದು ಗಾಯವನ್ನೋ?
ಉಳಿಸಿಹೋದ ಕಲೆಗಳನ್ನೋ ?
ಒಂದಷ್ಟು ಕನ್ಫ್ಯೂಷನ್
ನನಗೆ ಅಪ್ಪ ನೆನಪಾಗುತ್ತಾನೆ
ಅವನ ಮೈಯಲ್ಲಿ ಆದ ಗಾಯಗಳೆಷ್ಟೋ?
ನಾನೂ ಒಮ್ಮೊಮ್ಮೆ ಅಪ್ಪನನ್ನು ಕೇಳುತ್ತಿದ್ದೆ
ಈ ಕಲೆ ಯಾವುದಕ್ಕೆ ಆ ಕಲೆ ಯಾವುದಕ್ಕೆ ಎಂದು
ಮೈಯಲ್ಲಿನ ಎಲ್ಲಾ ಕಲೆಗಳೂ ಹಸಿವಿನ
ಸಂಕಟಕ್ಕೆ ಹೊಟ್ಟೆಯ ಸೊಕ್ಕನ್ನು ಅಡಗಿಸಲು
ತಮ್ಮಾ ಎಂದು ಅಪ್ಪ ಉಚ್ಚರಿಸುತ್ತಿದ್ದ
ಒಂದೊಂದಕ್ಕೂ ಅವನಲ್ಲಿ ಉತ್ತರವಿತ್ತು
ಗಾಯ ವಾಸಿಯಾಗಿ ಉಳಿದ ಕಲೆಗಳು
ಅಪ್ಪನ ಜೊತೆಯಾಗಿಯೇ ಹೋದವು
ಹೊಟ್ಟೆಯಲ್ಲುಟ್ಟಿದ ನಾನು ಇಲ್ಲಿಯೇ
ಉಳಿದುಬಿಟ್ಟೆ ಏಕಾಂಗಿಯಾಗಿ
ಈಗ ನನ್ನವರೆನ್ನುವವರು ಯಾರೂ ಇಲ್ಲ
ಸುಡುಬಿಸಿಲ ನೆಲದಲಿ
ಬಗೆದು ಬಗೆದು ಅಪ್ಪನನ್ನು ನೋಡಲೆತ್ನಿಸುತ್ತೇನೆ
ಮಣ್ಣನ್ನು ಎಷ್ಟೇ ಅಗೆದರೂ ಅಪ್ಪ ಬರಲಾರ
ಎನ್ನುವ ಅರಿವಿದ್ದರೂ…
ಮುಗಿಲ ಮರೆಯಲ್ಲಿ ನಿಂತ ಅಪ್ಪ
ನನ್ನನ್ನು ನೋಡುತ್ತಾನೆ,
ಮುಗುಳ್ನಗುತ್ತಾನೆ ಈಗ ನಗು ಅಪ್ಪನ ಸ್ವತ್ತು
ಮುಗಿಲು ಅಪ್ಪನ ಜೊತೆಯಾಗಿ
ನನಗೆ ಮುಗಿಯದ ಇರುಳಾಗಿದ್ದಾನೆ ಅಪ್ಪ
-ಕೊಟ್ರೇಶ್ ಕೊಟ್ಟೂರು
*****