ಪ್ರೀತಿಯ ಅಪ್ಪಾಜಿಗೆ,
. ನನಗೆ ಜೀವನದ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆ ಇದ್ದರೆ, ಯಾರೊಂದಿಗೆ ಹೇಗೆ ವರ್ತಿಸಬೇಕು ಎನ್ನುವ ನಡವಳಿಕೆ ಕಲಿತಿದ್ದರೆ ಅದಕ್ಕೆ ಅಮ್ಮನಲ್ಲ, ಅಪ್ಪನೇ ಹೆಚ್ಚು ಪ್ರೇರಣೆ ಎಂದು ತುಂಬಾ ಖುಷಿಯಿಂದ ಹೇಳಿಕೊಳ್ಳುತ್ತೇನೆ.
ಚಿಕ್ಕವರಾಗಿದ್ದಾಗಿನಿಂದಲೂ ಓದುವುದು ಜೀವನ ನಡೆಸುವ ಸಲುವಾಗಿ ಹೌದು. ಆದರೆ , ಅದರಾಚೆಗೆ ಒಂದು ಜಗತ್ತಿದೆ ಅದನ್ನು ತಿಳಿದುಕೊಳ್ಳುವುದಕ್ಕೆ ,ಅನುಭವಿಸುವುದಕ್ಕೆ ಅಕ್ಷರಗಳು ತುಂಬಾ ಮುಖ್ಯ ಎಂದು ಕಲಿಸಿಕೊಟ್ಟವರು ಅಪ್ಪ.
ಆ ಜಗತ್ತು ಎಂದರೆ ಪ್ರಾಣಿ, ಪಕ್ಷಿ, ಗಿಡ ,ಬಳ್ಳಿ, ನಕ್ಷತ್ರ, ಆಗಸ. ಮತ್ತೂ ಇವೆಲ್ಲವನ್ನೂ ಒಳಗೊಂಡ ನಮ್ಮ ನಮ್ಮ ಆಲೋಚನೆ, ಕಲ್ಪನೆಗಳಿಂದ ಮೂಡುವ ಅಸಾಧಾರಣ ಲೋಕ.ಅಲ್ಲಿ ನಮ್ಮ ವಾಸ್ತವಿಕ ಜೀವನದ ಒಂದು ವಿಚಾರಗಳೂ ಸುಳಿಯುವುದಿಲ್ಲ.ಇದೆಲ್ಲದರ ಆನಂದ ಸವಿಯಲು ಕಲಿಸಿದ ಅಪ್ಪನಿಗೆ ನಾನು ಜೀವನ ಪೂರ್ತಿ ಋಣಿ.
ಚಿಕ್ಕವರಿದ್ದಾಗಿನಿಂದಲೂ ಅಪ್ಪ ತಮ್ಮ ನಿರ್ಧಾರಗಳೇ ಅಂತಿಮ ಎಂದು ನಮ್ಮ ಮೇಲೆ ಹೇರಿಲ್ಲ .ಬದಲಾಗಿ ಹೀಗೆ ಮಾಡಿದರೆ ಸೂಕ್ತ ಆದರೆ ನಿನ್ನ ಮನಸ್ಸಿಗೆ ಏನು ಖುಷಿ ನೀಡುವುದೋ ಅದಕ್ಕೆ ಮೊದಲ ಆದ್ಯತೆ ನೀಡು ಎನ್ನುತ್ತಿದ್ದರು.
ಇತ್ತೀಚೆಗೆ ತಮಗೆ ಅನ್ನಿಸಿದ್ದನ್ನು ಹೇಳಿ ನಮ್ಮ ಅನಿಸಿಕೆಗಳನ್ನು, ನಿರ್ಧಾರಗಳನ್ನು ಸಹ ಕೇಳುತ್ತಾರೆ. ಎಂದೂ ನಾನು ದೊಡ್ಡವನು. ಇವಳು ಚಿಕ್ಕವಳು .ಇವಳಿಗೇನು ಗೊತ್ತು? ಎನ್ನುವ ಮನಸ್ಥಿತಿಯವರಲ್ಲ.ತಂದೆ ತಾಯಿಗೆ ತೀರಾ ವಯಸ್ಸಾಗುವುದರ ಮೊದಲೇ ಮಕ್ಕಳು ಅವರ ಜವಾಬ್ದಾರಿಯನ್ನು ಅರಿಯಬೇಕು.ಹೀಗಿದ್ದಾಗ ಮಾತ್ರ ಮಕ್ಕಳು ಮುಂದೆ ಸ್ವತಂತ್ರರಾಗಿ ಯಾರ ಮೇಲೂ ಅವಲಂಬಿತರಾಗದೇ ಬದುಕಬಹುದು ಎನ್ನುವ ವಿಚಾರ ಅಪ್ಪನದ್ದು.ಅವರು ನನಗೆ ಕೈ ಹಿಡಿದು ಕಲಿಸಿದ್ದು , ಬೈದು ಹೊಡೆದು ಹೇಳಿದ್ದು ನೆನಪಿಲ್ಲ.ಅವರನ್ನು ನಾವೇ ಅನುಸರಿಸುವಂತೆ ಅವರು ನಡೆದುಕೊಂಡಿದ್ದಾರೆ.
ಅಪ್ಪನೊಂದಿಗೆ ನಾನು ಫೋನಿನಲ್ಲಿ ಕೇವಲ ಆರಾಮ? ಊಟ ಆಯಿತೇ? ಎಂದು ಕೇಳುವುದಕ್ಕಿಂತ ಚರ್ಚಿಸುವುದೇ ಹೆಚ್ಚು.ದಿನಪತ್ರಿಕೆಯಲ್ಲಿ ಓದಿದ್ದು,ನಾನು ಆ ದಿನ ನೋಡಿದ್ದು, ಕಲಿತದ್ದು ಹೀಗೆ ಹತ್ತು ಹಲವು ವಿಚಾರಗಳು.ಅವರು ನನ್ನ ಅಪ್ಪ ಎನ್ನುವುದಕ್ಕಿಂತ ಆತ್ಮೀಯ ಸ್ನೇಹಿತ.
ಒಬ್ಬ ವ್ಯಕ್ತಿ ತನ್ನ ಕುಟುಂಬ, ಸಂಬಂಧಿಕರ ಜೊತೆಗೆ ಆತ್ಮೀಯವಾಗಿ ಇರುವುದು ತೀರಾ ಸಾಮಾನ್ಯ. ಆದರೆ ಅಪಾರ ಸ್ನೇಹಿತರನ್ನು ಸಂಪಾದಿಸುವುದು ಹಾಗೂ ಅವರು ಸದಾ ಗೌರವಿಸುವುವಂತೆ ನಡೆದುಕೊಳ್ಳುವುದು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಅವಲಂಬಿಸಿದೆ. ಆ ರೀತಿಯ ವ್ಯಕ್ತಿತ್ವದ ವ್ಯಕ್ತಿ ನನ್ನ ಅಪ್ಪ. ಅವರೇ ನನ್ನ ಗುರು,ಅವರಂತೆಯೇ ಆಗುವುದೇ ನನ್ನ ಗುರಿ.
ಆದ್ದರಿಂದಲೇ ಅವರು ಸದಾ ನನ್ನ ಹೆಮ್ಮೆ.
-ಅಪೂರ್ವ ಹಿರೇಮಠ, ಬೆಂಗಳೂರು