ಅನುದಿನ‌ ಕವನ-೫೩೬, ಕವಯತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಯೋಗ ಸುಯೋಗ, ಯೋಗದ ಚಿತ್ರಗಳು: ಶಿವಶಂಕರ ಬಣಗಾರ, ಹೊಸಪೇಟೆ

ಯೋಗ ದಿನಾಚರಣೆ(ಜೂ.21) ಅಂಗವಾಗಿ ಕವಯತ್ರಿ ಶ್ರೀಮತಿ ಶೋಭ ಮಲ್ಕಿಒಡೆಯರ್ ಅವರು ರಚಿಸಿರುವ ಯೋಗ-ಸುಯೋಗ ಕವಿತೆ ಇಂದಿನ ‘ಅನುದಿನ ಕವನ’ ದ
ಗೌರವಕ್ಕೆ ಪಾತ್ರವಾಗಿದೆ.👇

👉ಯೋಗ – ಸುಯೋಗ👈

ಮಾಡೋಣ ಯೋಗ
ಅಂತರಾತ್ಮಕವಾಗಿ, ಭಾವನಾತ್ಮಕವಾಗಿ
ದೂಡೋಣ ರೋಗ !
ಧ್ಯಾನ ಮತ್ತು ಯೋಗದಿಂದ
ರೋಗ ಮುಕ್ತ ಜೀವನ
ಯಾರಲ್ಲೂ ಒತ್ತಡವಿಲ್ಲ, ಒತ್ತಾಯವಿಲ್ಲ
ಅರಿತರೆ ಸರಳ ವಿಧಾನ !

ಹಿರಿ – ಕಿರಿಯರಾದಿಯಾಗಿ ಎಲ್ಲರೂ
ಮಾಡಬಹುದಾದಂತಹ ಯೋಗ
ಇಂದಿನ ಒತ್ತಡದ ಬದುಕಿನಲ್ಲಿ
ಎಲ್ಲಿದೆ ಸಮಯ !? ಕೆಲವರಲ್ಲಿ ಒಂದೇ ರಾಗ !

ಇರುವ ಸಮಯದಲ್ಲೇ
ಒಂದು ಘಂಟೆ ಮೀಸಲಿಡೋಣ
ಭವ ಭಾವಗಳ ಜಂಜಡವ ಸರಿಸಿ
ಕ್ರಮಬದ್ಧವಾಗಿ ಉಸಿರಾಡುತ
ದೇಹದ ಕೊಬ್ಬನ್ನು ಕರಗಿಸೋಣ !

ಮನಸ್ಸೊಳಗಿನ ತಲ್ಲಣವ
ತಲೆಯಿಂದ ತೆಗೆದಿಟ್ಟು
ಶುದ್ಧ ದೇಹ ಮತ್ತು ಮೆದುಳಿಗೆ
ನವೋಲ್ಲಾಸವ ತುಂಬುತ
ಮಾಡೋಣ ಸಂತಸದಿ ಚಿಂತೆಗಳ ದೂರವಿಟ್ಟು !

ಹಿತ – ಮಿತ ಆಹಾರ ಸೇವನೆಯ ಮಾಡಿ
ಹಕ್ಕಿಯಂತೆ ಹಗುರಾಗಿ ವಿಹರಿಸೋಣ
“ಆರೋಗ್ಯವೇ ಭಾಗ್ಯ” ಎಂಬ ಸೂಕ್ತಿಯ
ಸದಾ ಮನದಲ್ಲಿ ಸ್ಮರಿಸೋಣ !

ಓಂ ಶಾಂತಿ ಮಂತ್ರವ
ಭಕ್ತಿಯಿಂದ ಪಠಿಸೋಣ
ವಿಶ್ವ ಚೇತನ ಪತಂಜಲಿ ಮುನಿಗೆ
ಶಿರಬಾಗಿ ನಮಿಸೋಣ !


-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ
*****