ʼನಿಮ್ಮ ಹಾಗೆ ಯೋಗಾಸನ ಹಾಕೋದು ಕಷ್ಟʼ- ‘ಫೇಸ್ ಬುಕ್’ ನಲ್ಲಿ ನಾನು ಹಾಕುವ ಚಿತ್ರಗಳನ್ನು ನೋಡಿದವರು ಹೇಳುವ ಮಾತಿದು.
ನನಗೆ ನಗೆ ಬರುತ್ತದೆ. ಏಕೆಂದರೆ, ಯೋಗಾಸನ ಎಂಬುದು ಮೈಮಣಿಸುವ ಕ್ರಿಯೆ ಅಲ್ಲ. ನಿಮ್ಮ ಮೈ ಮಣಿಯದಿದ್ದರೂ ಪರವಾಗಿಲ್ಲ. ಆದರೆ, ಅದನ್ನು ಮಣಿಸಲು ಮಾಡುವ ಪ್ರಯತ್ನವೇ ಯೋಗ. ಎಲ್ಲಕ್ಕಿಂತ ಮುಖ್ಯವೆಂದರೆ, ಮೈಮಣಿಸುವ ಭಂಗಿಯಲ್ಲಿ ಉಸಿರಾಟ ಹೇಗೆ ಮಾಡುತ್ತೀರಿ ಎಂಬುದನ್ನು ಗ್ರಹಿಸುವುದು ಹಾಗೂ ಆ ಕ್ರಿಯೆಯನ್ನು ಮನಸಾರೆ ಆಸ್ವಾದಿಸುವುದು ನಿಜವಾದ ಯೋಗ.
ಟಿವಿಯಲ್ಲಿ ನೋಡುವ, ಪತ್ರಿಕೆಗಳಲ್ಲಿ ಕಾಣಿಸುವ ಯೋಗದ ಭಂಗಿಗಳೇ ನಿಜವಾದ ಯೋಗ ಎಂಬುದು ತಪ್ಪು ಕಲ್ಪನೆ. ಜಾಸ್ತಿ ಮೈಮಣಿಸುವವ ಉತ್ತಮ ಯೋಗಪಟು ಎಂಬುದು ಶುದ್ಧ ಮೂರ್ಖತನ. ಜನರ ಈ ಭಾವನೆಯನ್ನೇ ಬಂಡವಾಳ ಮಾಡಿಕೊಂಡು, ದುಡ್ಡಿಗೆ ಹಾಗೂ ಪ್ರಚಾರಕ್ಕೆ ಯೋಗ ಕಲಿಸುವವರು ಹೆಚ್ಚಾಗಿದ್ದಾರೆ. ಉದಾಹರಣೆಗೆ, ಬಾಬಾ ರಾಮದೇವ್.
ಯೋಗ ಎಂಬುದು ಮನೋದೈಹಿಕ ಸಾಮರಸ್ಯ ಮೂಡಿಸುವ ಒಂದು ಅದ್ಭುತ ಕ್ರಿಯೆ. ಅದು ಪ್ರಚಾರದ, ಹಣ ಗಳಿಕೆಯ ಸಾಧನವಲ್ಲ. ಯೋಗವನ್ನು ನಮಗೆ ಇನ್ನೊಬ್ಬರು ಕಲಿಸುತ್ತಾರೆ ಎಂಬುದೂ ಅಂತಹುದೇ ಇನ್ನೊಂದು ಭ್ರಮೆ. ಅವರು ನಮಗೆ ಆಸನ ಭಂಗಿಗಳನ್ನು ಹೇಳಿಕೊಡಬಹುದು. ಆದರೆ, ಆ ಆಸನಗಳನ್ನು ನಾವು ಹೇಗೆ ಆಸ್ವಾದಿಸಬೇಕೆಂಬುದನ್ನು ನಾವೇ ರೂಢಿಸಿಕೊಳ್ಳಬೇಕು. ಅದೇ ನಿಜವಾದ ಕಲಿಕೆ. ಅದೇ ನಿಜವಾದ ಸಾಧನೆ.
ಮಾಧ್ಯಮಗಳಲ್ಲಿ, ಪಾರ್ಕ್‌ಗಳಲ್ಲಿ, ಶಿಬಿರಗಳಲ್ಲಿ ಕಾಣಿಸುವ ಬಹುತೇಕ ಯೋಗ ಪ್ರಕ್ರಿಯೆ ಕೇವಲ ಪ್ರದರ್ಶನ ಯೋಗವೇ ಹೊರತು ನಿಜವಾದ ಯೋಗವಲ್ಲ. ಅದು ನಿಮಗೆ ಯೋಗ ಲೋಕಕ್ಕೆ ಪ್ರವೇಶ ನೀಡುವ ಸಣ್ಣ ಬಾಗಿಲೇ ಹೊರತು, ಅದೇ ಅಂತಿಮವಲ್ಲ.
ಕಳೆದ 37 ವರ್ಷಗಳಿಂದ ಯೋಗಾಸನ ಮಾಡುತ್ತಿರುವ ನಾನು ಈ ಕಾರಣಕ್ಕಾಗಿ ಯೋಗಾಸನವನ್ನು ವೃತ್ತಿಯನ್ನಾಗಿ ಮಾಡಿಕೊಳ್ಳಲಿಲ್ಲ. ಯೋಗಾಸನ ಮತ್ತು ಇಂತಹ ಕ್ರಿಯೆಗಳು ಪ್ರವೃತ್ತಿಯಾಗಬೇಕೇ ಹೊರತು ವೃತ್ತಿಯಾಗಬಾರದು. ಅದು ನನ್ನ ವೈಯಕ್ತಿಕ ನಿಲುವಷ್ಟೇ ಅಲ್ಲ, ಆಚರಣೆಯೂ ಹೌದು.
ಇನ್ನು, ನಾನು ಯೋಗಾಸನದ ಫೊಟೊ ಹಂಚಿಕೊಳ್ಳುವುದು ಇತರರಲ್ಲಿ ಪ್ರೇರಣೆ ಮೂಡಿಸಲು ಮಾತ್ರವೇ ಹೊರತು ಅನ್ಯ ಉದ್ದೇಶವಿಲ್ಲ. ಇಂತಹ ಉತ್ತಮ ಜೀವನ ಪದ್ಧತಿಯೊಂದು ಧರ್ಮದ ಕಟ್ಟಳೆಗೆ ಸಿಲುಕಬಾರದು. ಹಿಂದುಗಳಷ್ಟೇ ಯೋಗ ಮಾಡಬೇಕು ಎಂಬ ಹುಚ್ಚು ಕಲ್ಪನೆ ಅನ್ಯಧರ್ಮೀಯರಲ್ಲಿದೆ. ಅದು ಕೂಡಾ ತಪ್ಪೇ.
ಏಕೆಂದರೆ, ಆರೋಗ್ಯ ಎಂಬುದು ಸಾರ್ವತ್ರಿಕ ವಿಷಯ. ಅದಕ್ಕೆ ಯಾವುದೇ ಧರ್ಮ, ಜಾತಿ, ವರ್ಗ, ಲಿಂಗ, ಪ್ರದೇಶ, ಭಾಷೆಯ ಹಂಗಿಲ್ಲ. ಇರಲು ಸಾಧ್ಯವೂ ಇಲ್ಲ. ನಿಮ್ಮ ಮನೋದೈಹಿಕ ಆರೋಗ್ಯಕ್ಕಾಗಿ ಯಾವುದೇ ಜೀವನ ಪದ್ಧತಿಯನ್ನು ಅನುಸರಿಸಿ. ಅದು ಖಂಡಿತ ಮಾನ್ಯ.
ನಿಮ್ಮೊಳಗೆ ನೀವೇ ಲೀನವಾಗುತ್ತಾ, ನಿಮಗೆ ನೀವೇ ಗುರುವಾಗುತ್ತ ಹೋಗುವುದೇ ಯೋಗ. ಉಳಿದಿದ್ದೆಲ್ಲ ಲೊಳಲೊಟ್ಟೆ.
ಬಹಳ ದಿನಗಳಿಂದ ಹಂಚಿಕೊಳ್ಳಬೇಕಾಗಿದ್ದ ಈ ವಿಷಯವನ್ನು ವಿಶ್ವ ಯೋಗ ದಿನದ ನೆವದಲ್ಲಿ ಹೇಳಿದ್ದೇನೆ.
ಎಲ್ಲರಿಗೂ ಉತ್ತಮ ಮನೋದೈಹಿಕ ಆರೋಗ್ಯ ದಕ್ಕಲಿ.
–ಚಾಮರಾಜ ಸವಡಿ, ಕೊಪ್ಪಳ
*****