ಅನುದಿನ ಕವನ-೫೪೦, ಕವಿ: ಎಲ್ವಿ (ಡಾ. ಲಕ್ಷ್ಮಣ.ವಿ.ಎ) ಬೆಂಗಳೂರು

ಬಯಲು ಸೀಮೆಯ
ನನ್ನಪ್ಪನಿಗೆ
ಸಮುದ್ರ ವೆಂದರೆ ಎಲ್ಲಿರುತ್ತದೆ !?ಎಂದು
ಕೇಳಿ ಕುಹಕವಾಡಿದೆ
ಊರ ಸೀಮೆಯ
ದಾಟದ ನಮ್ಮಪ್ಪ ಚಣ ಯೋಚಿಸಿ
ಮೇಲೆ ಬೋಳು
ಆಕಾಶ ದಿಟ್ಟಿಸಿದ
ಅಪ್ಪನ ಕಣ್ಣಾಲಿಗಳಲ್ಲಾಗಲೇ
ಜೋಡು ನದಿ
ಸಮುದ್ರದ
ಪಹರೆಗೆ ನಿಂತಂತೆ,

ಅಪ್ಪನಿಗೆ ಬೋಳು ಆಗಸವೆಂದರೆ
ಬಲು ಬೇಜಾರು.ಈ ಸಲವೂ ಆಗಸ
ಕಪ್ಪಿಡಲಿಲ್ಲ, ಮಳೆಯಿಲ್ಲ, ಮಿಂಚಿಲ್ಲ
ಪಚ್ಚೆ, ಪೈರಲಿ ಹಸುರಿಲ್ಲ .
ಎಮ್ಮೆ ಹಸುಳಿಗೆ ಕುಡಿವ ನೀರಿಲ್ಲ

ಆ ದಿನ ಪೂರ್ಣ ಚಂದ್ರ
ಖಾಲೀ ಆಗಸ
ಹಾಲು ಬೆಳದಿಂಗಳು
ಹಾಳು ಸುರಿದಂತೆ ಲೋಕವೆಲ್ಲ
ನಮ್ಮನೆಯ ಮುದಿನಾಯಿ ಕರಿಯ
ಚುಕ್ಕಿ ಚಂದ್ರಮನ ನೋಡಿ
ಇಡೀ ಇರುಳು ಬೊಗಳಿದ್ದು ಮರೆತಿಲ್ಲ
ಹೊಟ್ಟೆ ಹಸಿದಾಗಲೆಲ್ಲ
ಅವ್ವ
ನನಗೆ ಮತ್ತು ಕರಿಯನಿಗೆ
ಚಂದ್ರನ ಚೂರು ತೋರಿಸಿ
ಮಲಗಿಸುತ್ತಿದ್ದೇಕೆಂದು ಈಗೀಗ
ಅರ್ಥ ವಾಗತೊಡಗಿದೆ.

ಅಪ್ಪ ಖಾಲೀ ಆಗಸ
ದಿಟ್ಟಿಸುತಲೇ ಒಂದು ದಿನ
ಅದರೊಳಗೊಂದಾಗಿ
ಚುಕ್ಕಿಯಾದ.
ಅಪ್ಪನ ಕಣ್ಣಾಲಿಗಳ ಜೋಡು ನದಿಗಳು
ಸಮುದ್ರ ಸೇರುವ ಮುನ್ನವೇ
ಬತ್ತಿ ಹೋದವು.

ಈಗ ನಾನು
ಮಲ್ಲಿಗೆ ಧ್ಯಾನದ ಕವಿ
ಈ ಚುಕ್ಕಿ, ಚಂದಿರ,
ಬೆಳದಿಂಗಳು ಖಾಲೀ ಆಗಸ…..
ದ ಕುರಿತು ‘ಬರೆ’ ಬರೆದು
ಓಹ್..!! ಹೆಸರುವಾಸಿ


-ಎಲ್ವಿ (ಡಾ. ಲಕ್ಷ್ಮಣ.ವಿ.ಎ) ಬೆಂಗಳೂರು
*****