ತ್ರಿಪಿಟಕಗಳಂತೆ
ಹೂಬಿಟ್ಟಿದೆ ನಮ್ಮ ಮನೆಯ
ಗುಲಾಬಿ
ಒಳಗೆ ಬುದ್ಧನಿರುವ
ಕಂಪಿಸುವ ಮನವನ್ನೊತ್ತು
ಸಾಗಿ ಸೈರಣೆಗೊಂಡ ಮಣ್ಣ ಕಂಪಿನಂತೆ
ಒಳಗೆ ಬುದ್ಧನೇ ಇರುವ
ಸುತ್ತ ವಿನಯ ಅಭಿಧಮ್ಮವಲ್ಲವೇ
ಮೂರು ಹೂ ಬುಟ್ಟಿಗಳು
ತುಂಬಿಕೊಂಡಿದೆ ಕರುಣೆ ಮತ್ತು ಅಪಾರ ಪ್ರೀತಿ
ಹಸಿರೆಲೆಯ ಮರೆಯಲ್ಲಿ ಮೃದು ಮುಳ್ಳಿದ್ದರೂ
ಚುಚ್ಚಬಹುದು ಹೂವ ಘಾಸಿಗೊಳಿಸುವ ಮನಕ್ಕೆ
ಎಲ್ಲಿದ್ದರೂ ಅರಳುವುದದರ ಕರುಣೆ
ನಿನ್ನೆ ಮೊಗ್ಗಾದದ್ದು
ನೋಡು ನೋಡುತ್ತಿದ್ದಂತೆಯೇ ಸಂತನಂತೆ
ಜೀವಗಟ್ಟಿತು
ಮುಡಿಯಬಹುದು ಹೆಂಗುರುಳು
ಸದಾ ನೀರು ಗೊಬ್ಬರವನುಣಿಸಿ
ಬಾಳಿಸಬಹುದು ಮಮತೆಯ ಕರುಳು.
🍁-ಡಾ.ನಿಂಗಪ್ಪ ಮುದೇನೂರು, ಧಾರವಾಡ