ಅನುದಿನ ಕವನ-೫೪೫, ಹಿರಿಯ ಕವಿ: ಸುಬ್ರಾಯ‌ ಚೊಕ್ಕಾಡಿ

ಪ್ರಸಿದ್ಧ, ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರಿಗೆ 82ನೇ ಜನುಮದಿನದ ಶುಭಾಶಯಗಳು. ಇವರ ನೂರಾರು ಕವಿತೆಗಳು ಜನಪ್ರಿಯವಾಗಿವೆ. ‘ಮುನಿಸು ತರವೇ ಮುಗುದೆ’ ಪದ್ಯ ಯಕ್ಷಗಾನದ ದಾಟಿಯಲ್ಲಿ ವಿಶ್ವ ಕನ್ನಡಿಗರ ಮನ ಗೆದ್ದಿದೆ. ಹಿರಿಯ ಚೇತನ ಸುಬ್ರಾಯ ಚೊಕ್ಕಾಡಿ ಅವರ ಈ ಕವನವನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ಇಂದು (ಜೂ.29) ಪ್ರಕಟಿಸುವ ಮೂಲಕ ಗೌರವ, ಪ್ರೀತಿ ಪೂರ್ವಕವಾಗಿ ಹುಟ್ಟು ಹಬ್ಬವನ್ನು ಆಚರಿಸುತ್ತಿದೆ.🙏💐🌺🎂💐🙏

ಮುನಿಸು ತರವೇ ಮುಗುದೆ
ಹಿತವಾಗಿ ನಗಲೂ ಬಾರದೆ ||

ಕರಿಮುಗಿಲ ಬಾನಿನಲ್ಲಿ ಮಿಂಚರಳಲು
ತಾರೆಗಳು ಮೈಯ ಬಳಸಿ ಜುಮ್ಮೆನ್ನಲು |
ನವ ಭಾವ ತುಂಬಿ ತುಂಬಿ ಮನ ಹಾಡಲು
ತೆರದಂತಿದೆ ಭಾಗ್ಯದ ಬಾಗಿಲು ||

ಎಷ್ಟೊಂದು ಕಾಲದಿಂದ ಹಂಬಲಿಸಿದೆ
ನೀ ಬಂದು ಸೇರಿ ನನ್ನ ಮುದಗೊಳಿಸಿದೆ |
ಜೀವನದ ನೂರು ಕನಸು ನನಸಾಗಿದೆ
ಮುನಿಸೇತಕೆ ಈ ಬಗೆ ಮೂಡಿದೆ ||

ಹೊಸ ಬಾಳ ಬಾಗಿಲಲ್ಲಿ ನಾವೀದಿನ
ನಿಂತಿರುವ ವೇಳೆಯಲ್ಲಿ ಏಕೀ ಮನ |ವಾಗರ್ಥದಂತೆ ನಮ್ಮ ಈ ಮೈಮನ
ಜತೆ ಸೇರಲು ಜೀವನ ಪಾವನ ||

-ಸುಬ್ರಾಯ ಚೊಕ್ಕಾಡಿ, ದಕ್ಷಿಣ ಕನ್ನಡ
*****