ಅನುದಿನ‌ ಕವನ-೫೫೦, ಕವಿ:ಮನಂ, ಬೆಂಗಳೂರು, ಕವನದ ಶೀರ್ಷಿಕೆ: ವಲಸೆ ಕಾರ್ಮಿಕ

ವಲಸೆ ಕಾರ್ಮಿಕ

ತನ್ನೂರಲ್ಲಿ ಒಂದಿಷ್ಟು ಕಾಳು ಕೂಳ ನೀಡದ ಹೊಲವಿಲ್ಲದೆ,
ತನ್ನವರೊಂದಿಗೆ ಬದುಕಲಿಷ್ಟು ಸಿರಿ ಸಂಪತ್ತಿನ ಬಲವಿಲ್ಲದೆ,
ತನ್ನ ಕಷ್ಟಕಾಲದಲ್ಲಿ ಕೈಯಿಡಿವವರ ಕರುಣೆ ಒಲವಿಲ್ಲದೆ,
ತನ್ನದಲ್ಲದ ಊರಿಗೆ ನಡೆದಾತ ವಲಸೆ ಕಾರ್ಮಿಕ.

ತನಗೊಂದಿಷ್ಟು ನೆಲೆ ನೀಡಿದ ಊರಲ್ಲಿ ನೆಲೆಯಾಗಿ ನಿಂತವ,
ತನ್ನ ದುಡಿತಕಷ್ಟು ಬೆಲೆ ನೀಡಿದ ಮಾಲಿಕನಿಗಾಗಿ ದುಡಿಯುವವ,
ತನ್ನ ಕನಸುಗಳ ಕದಡಿ ದುಡಿಯುತ್ತಾ ದುಡಿಯುತ್ತಾ ಮಡಿಯುವವ,
ತನ್ನದಲ್ಲದ ಕೆಲಸಗಳ ಮಾಡಿ ಸೈ ಎನಿಸಿಕೊಳ್ಳಲು ನಿಂತಾತ ವಲಸೆ ಕಾರ್ಮಿಕ.

ತನ್ನ ಬುದ್ಧಿ ಬಲದಿ ಒಂದಿಷ್ಟು ಗಳಿಸಿ ನಿಂತಾಗ ತನ್ನೂರಿನವರಿಗೆ ದಾನಿಯಾದವ,
ತನ್ನ ಬದುಕು ಕಟ್ಟಿಕೊಳ್ಳಲು ಬಡಿದಾಡಿ ಗೆದ್ದಾಗ ಮುತ್ತಿಕೊಂಡ ಜನರ ನಡುವೆ ನಿಂತವ,
ತನ್ನ ನೋವು ನಲಿವುಗಳ ನುಂಗುವ ಕಾಯಕದಿ ಮಿಗಿಲೆನಿಸಿ ಕೊಂಡವ,
ತನ್ನ ಹಲವು ಸುಳ್ಳು ಸಂತಸಗಳ ತನ್ನೂರಲ್ಲಿ ಆಗಾಗ ಹಂಚುವವ ವಲಸೆ ಕಾರ್ಮಿಕ.

ತನ್ನ ಬದುಕು ಬವಣೆಗಳ ಮುಚ್ಚಿಡಲಾಗದೆ ಒಂದಲ್ಲ ಒಂದು ದಿನ ತನ್ನೂರಿಗೆ ನಡೆಯುವವ,
ತನ್ನ ಮಕ್ಕಳ ಬದುಕು ತನ್ನೂರಿನಲ್ಲಿ ಸುಖಮಯವಾಗಲಿ ಎಂದು ಹಂಬಲಿಸುವವ,
ತನ್ನನ್ನೆ ಬೆಳೆಸಿ ಸಾಕದ ಊರನ್ನು ತಾನು ಸಾಯುವ ತನಕ ನೆನೆಯುತ್ತಾ ಪುಳಕಗೊಳ್ಳುವವ,
ತನ್ನ ಕೊನೆಯ ದಿನಗಳನ್ನು ಸಂತಸದಿ ಕಳೆಯಲು ಸತತ ದುಡಿಯುವವ ವಲಸೆ ಕಾರ್ಮಿಕ

– ಮನಂ, ಐಪಿಎಸ್ (ಎಂ. ನಂಜುಂಡಸ್ವಾಮಿ)
ಬೆಂಗಳೂರು
*****

(ಫೋಟೊ (ಕಾರ್ಮಿಕರು) ಸೌಜನ್ಯ: ವಿನೋದ್ ಕಾಪ್ರಿ

PC:Vinod kapri)