ಅನುದಿನ ಕವನ-೫೫೧, ಕವಿ: ಜಯಕವಿ (ಜಯಪ್ಪ ಹೊನ್ನಾಳಿ), ಮೈಸೂರು, ಕವನದ ಶೀರ್ಷಿಕೆ: ನೀನೊಂದು ಜೀವನದಿ, ರಾಗ ಸಂಯೋಜನೆ-ಗಾಯನ: ಅತಿಶಯ ಜೈನ್, ಮೈಸೂರು

ಜು.1 ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷೆ, ಸಾಹಿತಿ ಎ. ಹೇಮಗಂಗಾ ಅವರ ಜನುಮದಿನ. ಅಂದು ಮೈಸೂರಿನ ಕವಿ ಜಯ ಕವಿ ಅವರು ‘ನೀನೊಂದು ಜೀವನದಿ’ ಕವಿತೆ ಬರೆದು ಶುಭ ಕೋರಿದರೆ ಯುವ ಗಾಯಕ ಅತಿಶಯ ಜೈನ್ ಅವರು ರಾಗ ಸಂಯೋಜಿಸಿ, ಹಾಡಿ ಹುಟ್ಟುಹಬ್ಬಕ್ಕೆ ಮೆರಗು ತಂದಿದ್ದರು.
‘ನೀನೊಂದು ಜೀವನದಿ’ ಕವನ ಪ್ರಕಟಿಸುವ ಮೂಲಕ
ಕರ್ನಾಟಕ ಕಹಳೆ ಡಾಟ್ ಕಾಮ್ ಹಿರಿಯ ಸಾಹಿತಿ ಎ.‌ ಹೇಮಗಂಗಾ ಅವರಿಗೆ
ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲಿದೆ.👇

ನೀನೊಂದು ಜೀವನದಿ

ನೀನೊಂದು ಜೀವನದಿ
ನಿಜ ಹೇಮಗಂಗಾ..!
ನಿನ್ನಂತರಂಗವದು
ಭಾವದ ಉತ್ತುಂಗ..!
ನಿನ್ನೊಲವಿನ ಎಡಬಲ ದಡದಿ
ಶಾಲಿವನ ಬನವೆ..!
ನಿನದು ಹೂ ಹಣ್ಣುಗಳ
ಮಡಿಲ ಮಡಿ ಮನವೆ..!

ಮಂಗಳೆಯೆ ನಿನ್ನ ದನಿ
ಮಂಗಳದ ಘಂಟೆ..!
ನಗುವೆ ನಂದಾದೀಪ
ಗುಣಕುಪಮೆ ಉಂಟೆ..!?
ಹೂ ಮುಡಿದು ನಲಿದಿರಲು
ನಿಜ ನೆಲದಾಯಿ ನೀನು..!
ಸೂಸುವುದು ಮುಗಿಲೆದೆಗು
ದಿಟ ಪರಿಮಳವು ತಾನು..!

ನೀ… ಪರಮ ಕನ್ನಡತಿ
ನಾಡಿನ ಹೊಂಜ್ಯೋತಿ..!
ನಿನ್ನ ಮುಗ್ಧತೆ ಪ್ರೀತಿ
ಬುವಿ ಬೆಳಗುವ ರೀತಿ..!
ನಗಲಿ ನಿನ್ನಂಗಳದಿ…
ಸತತವು ರಂಗೋಲಿ..!
ಚುಕ್ಕಿ ಚಂದ್ರಮ ಮೂಡಿ
ಭವಕೆ ದಿವವ ತರಲಿ..!

ಜೀವದಾರತಿ ತಾಯೆ
ನಿನ್ನ ಜನ್ಮದಿನಕೆ..!
ಹಾರೈಕೆಗಳ ಜೊತೆಗೆ
ನಮನ ನೆನವರಿಕೆ..!
ಬರಲಿ ಶತ ಚೈತ್ರಗಳು
ಫಲಗೊಳಿಸಲು ಪಾಡು..!
ದಿವದ ಸತ್ಕೃತಿ ನಿನಗೆ
ಹರಕೆಯು ಈ ಹಾಡು..!


-ಜಯಕವಿ (ಜಯಪ್ಪ ಹೊನ್ನಾಳಿ), ಮೈಸೂರು
*****


👆ರಾಗ ಸಂಯೋಜನೆ-ಗಾಯನ: ಅತಿಶಯ ಜೈನ್, ಮೈಸೂರು
*****