ಕವಯತ್ರಿ ಶ್ರೀ ಅವರ ಕಿರುಪರಿಚಯ:
ಶ್ರೀ ಕಾವ್ಯನಾಮದಲ್ಲಿ ಕವಿತೆ ರಚಿಸುತ್ತಿರುವ ಮಂಗಳೂರಿನ ಶ್ರೀಲಕ್ಷ್ಮಿ ಅದ್ಯಪಾಡಿ ಅವರು ಬಹುಮುಖಿ.
ಮಂಗಳೂರಿನಲ್ಲಿ 20-06-1990 ರಂದು ಜನಸಿದ ಶ್ರೀ ಲಕ್ಷ್ಮಿ ಅವರು ಮಂಗಳ ಗಂಗೋತ್ರಿಯಲ್ಲಿ ಫ್ಯಾಶನ್ ಡಿಸೈನ್ ನಲ್ಲಿ ಬಿ.ಎಸ್ಸಿ ಪದವಿಯನ್ನು ಪೂರ್ಣಗೊಳಿಸಿ, ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಫ್ಯಾಶನ್ ಡಿಸೈನ್ ನಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಪ್ರಸ್ತುತ ಫ್ಯಾಶನ್ ಡಿಸೈನ್ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಹವ್ಯಾಸಿ ಫ್ಯಾಶನ್ ಡಿಸೈನರ್ ಆಗಿಯೂ ಗಮನ ಸೆಳೆದಿದ್ದಾರೆ.
ಮಂಗಳೂರಿನ ಸುರತ್ಕಲ್ನಲ್ಲಿ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿರುವ ಇವರು ವೃತ್ತಿಯ ಜತೆ ಬಿಡುವಿನ ವೇಳೆಯಲ್ಲಿ ಓದುವುದು, ಬರವಣಿಗೆ, ಚಿತ್ರಕಲೆ, ಕಸೂತಿ, ಕೈತೋಟ ಹೀಗೆ ವಿವಿಧ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಸಂತಸ ಕಾಣುತ್ತಿದ್ದಾರೆ.
ಇಂದಿನ ಅನುದಿನ ಕವನದ ಗೌರವಕ್ಕೆ ಶ್ರೀ ಲಕ್ಷ್ಮಿ ಅದ್ಯಪಾಡಿ ಅವರ ‘ವಿರಹಿಯ ಸ್ವಾಗತ’ ಕವಿತೆ ಪಾತ್ರವಾಗಿದೆ.👇
ವಿರಹಿಯ ಸ್ವಗತ….
ಹೊರಗೆಲ್ಲೋ ಸುತ್ತಿ ಸುಳಿದು ಹರಡುತ್ತಿರುವ ಬೇಸಗೆಯ ಸುಡುಗಾಳಿ… ಅಂಗಳದ ತುಂಬಾ ತರಗೆಲೆಗಳು ಎತ್ತಲೀಂದೆತ್ತಲೋ ಹಾರಾಡುತ್ತಿವೆ..
ಒಳಗೆಲ್ಲೋ ತಡೆ ತಡೆದು ಹರಡುತ್ತಿರುವ ಅವನ ನೆನಪಿನ ಚೂರುಗಳು, ಕನಸ ಪೆಟ್ಟಿಗೆ ತೆರೆದು ಚೆಲ್ಲಾಪಿಲ್ಲಿ…
ದೀಪ ದಂಡೆಯ ಮೇಲೆ ಹಚ್ಚಿಟ್ಟ ಮುಸ್ಸಂಜೆ ಹಣತೆ ಗಾಳಿಯ ರಭಸಕ್ಕೆ ಅತ್ತಿಂದಿತ್ತ ಓಲಾಡುತ್ತಿದೆ..
ನಿಧಾನವಾಗಿ ಆವರಿಸುತ್ತಿರುವ ಅಸಹನೀಯ ಏಕಾಂತದ ಮುಸುಕು ಕತ್ತಲಿಗೇನು ಗೊತ್ತು ಅವಳಂತರಂಗದ ತುಮುಲ..
ಬೆಳಕು ಕಣ್ಣು ಕುಕ್ಕಿದರೆ, ಕತ್ತಲು ಪ್ರೇಮದ ಗಾಯವನ್ನು ಇನಿತಿನಿತೇ ಕೆದಕುತ್ತಿದೆ..ಅವನಿರದ ಖಾಲಿತನ ಮತ್ತೆ ಮತ್ತೆ ಚುಚ್ಚುತ್ತಿದೆ.. ಒಳ ಕೋಣೆಯಲ್ಲೆಲ್ಲೋ ವಿರಹದುರಿಯಲ್ಲಿ ಬೇಯುತ್ತಿರುವ ಅವಳ ಕಣ್ಣ ತುಂಬಾ ಬರಿಯ ನಿರೀಕ್ಷೆಯ ಧಗೆ…
– ಶ್ರೀ..
(ಶ್ರೀ ಲಕ್ಷ್ಮಿ ಅದ್ಯಪಾಡಿ, ಮಂಗಳೂರು)
*****