ಅನುದಿನ ಕವನ-೫೫೮, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ:ನಿಲ್ಲಿಸು ನೋಯಿಸುವ ಆಟ

ನಿಲ್ಲಿಸು ನೋಯಿಸುವ ಆಟ 👇

ನೋಯಿಸುವ ಆಟ
ನಿಲ್ಲಿಸಿಬಿಡು ಗೆಳೆಯ….
ಇಲ್ಲವಾಗಿಸುವವರು
ಎಂದಿಗೂ ಉಳಿದಿಲ್ಲ
ಇತಿಹಾಸದ ಪುಟಗಳಲ್ಲಿ.

ಯಾರನ್ನು ಉಳಿಸುತ್ತೇನೆ
ಎಂಬ ಪಣ ತೊಟ್ಟಿರುವೆಯೋ
ಅದು ನಿನ್ನ ಉಳಿಸಿದರೆ ಸಾಕು.
‘ಕೊಂದು ಕಾಯು ನನ್ನ’
ಎಂದು ಯಾವ ಧರ್ಮವೂ
ಪಿಸುಗುಟ್ಟಿಲ್ಲ….

ತಬ್ಬಿದರೆ ಮನುಷ್ಯತ್ವ
ಎಲ್ಲರೆದೆಯಲಿ ನಿನಗೂ
ದಕ್ಕೀತು ಒಲವಿನ ತಾವು.
ಕತ್ತಿ, ಬಂದೂಕುಗಳಿಗೂ ಒಮ್ಮೆ
ತುಕ್ಕು ಹಿಡಿಯುತ್ತದೆ….
ಕಣ್ಣ ಹೊಳಪು, ನಿಷ್ಕಲ್ಮಶ ನಗೆ
ಅನುಗಾಲ ಉಳಿಯುತ್ತದೆ.

ಬಾ ಮನುಷ್ಯರಾಗೋಣ….
ಎದೆಯಿಂದಲೆದೆಗೆ ಒಲವು ಹನಿಸೋಣ!

¶ನಾಗೇಶ್ ಜೆ. ನಾಯಕ, ಸವದತ್ತಿ
*****