ಅನುದಿನ ಕವನ-೫೫೯, ಕವಯತ್ರಿ: ಶೋಭಾ ಮಲ್ಕಿ ಒಡೆಯರ್🖊️ಹೂವಿನ ಹಡಗಲಿ, ಕವನದ ಶೀರ್ಷಿಕೆ: ಅತಿವೃಷ್ಟಿ

ಅತಿವೃಷ್ಟಿ

ಕನಸುಗಳು ಕಣ್ತುಂಬ ನೂರಾರು
ಕಣ್ಮುಚ್ಚಿ ತೆಗೆಯಲು ಬರೀ ನೀರೇ ನೀರು
ಆಪತ್ಕಾಲಕ್ಕೆ ಆಗುವುದೇ ಸರ್ಕಾರ
ಬರೀ ಆಶ್ವಾಸನೆ ಕೊಡಬೇಡಿ ಭರಪೂರ !

ಅತಿವೃಷ್ಟಿಯಿಂದ ಆಗಿದೆ ಎಲ್ಲೆಲ್ಲೂ ತಲ್ಲಣ
ಆರ್ಭಟಿಸುತ್ತಿದೆ ರುದ್ರ ನರ್ತನ
ಭೂಕುಸಿತದ ಭಯ ಕಂಪನ
ಪ್ರಕೃತಿಯ ವಿಕೋಪಕ್ಕೆ ತತ್ತರಿಸುತ್ತಿದೆ ಜನ !

ಶಾಂತಿದೂತನಾಗುವನೇ ಮಳೆರಾಯ
ಮೇಘ ರಭಸಕ್ಕೆ ಜೀವನವೇ ಅಯೋಮಯ
ರುದ್ರನರ್ತನಕ್ಕೆ ಕರಗಿಹೋಯ್ತು ಕನಸಿನ ಮನೆ
ಬೆಂಬಿಡದ ಬಡತನಕ್ಕೆ ಇನ್ನಾರು ಹೊಣೆ !

ಆಪತ್ಕಾಲಕ್ಕೆಂದು ಕೂಡಿಟ್ಟ ಧಾನ್ಯ ನೀರು ಸೇರಿತು
ಕಣ್ಣುಮುಂದೆ ದನ – ಕರುಗಳು ಕಾಣೆಯಾಯ್ತು
ಕಷ್ಟಕ್ಕೆ ಕೂಡಿಟ್ಟ ಹಣವೆಲ್ಲ ನೀರಿನಲ್ಲಿ
ಅಸಹಾಯಕತೆ ಕಣ್ಣೀರೊಂದೇ ನಮ್ಮಲ್ಲಿ !

ಇನ್ನಾದರೂ ನಿಸರ್ಗವನ್ನು ಕಾಪಾಡೋಣ
ದುರಾಲೋಚನೆಯನ್ನು ಬಿಟ್ಟು ಬಿಡೋಣ
ಪ್ರಕೃತಿ ಮುನಿದರೆ ಅಪಾಯ ಕಟ್ಟಿಟ್ಟ ಬುತ್ತಿ
ಭೂತಾಯಿಯ ಜತನವೊಂದೇ ಭವಿಷ್ಯದ ಯುಕ್ತಿ!

 

-ಶೋಭಾ ಮಲ್ಕಿ ಒಡೆಯರ್🖊️
ಹೂವಿನ ಹಡಗಲಿ
*****