ಹೊಸಪೇಟೆ : ಹನ್ನೆರಡನೇ ಶತಮಾನದಲ್ಲಿ ಜೀವಿಸಿದ್ದ ಶಿವರಶರಣ ಶ್ರೀ ಹಡಪದ ಅಪ್ಪಣ್ಣನವರ ಜೀವನಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಆಂಡ್ ಕಾಮರ್ಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ವಿ.ಎಸ್. ದಯಾನಂದಕುಮಾರ್ ಅವರು ಹೇಳಿದರು.
ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ನಡೆ ನುಡಿ, ಆಚಾರ ವಿಚಾರಗಳು ಒಂದೇ ಆಗಿದ್ದರೆ ಬದುಕಿಗೊಂದು ಅರ್ಥವಿರುತ್ತದೆ. ಶಿವಶರಣರು ನುಡಿದಂತೆ ನಡೆದು ತಮ್ಮ ಅನುಭವಾಮೃತವನ್ನು ಇಡೀ ಮನುಕುಲಕ್ಕೆ ಉಣಬಡಿಸಿದ್ದಾರೆ ಎಂದು ತಿಳಿಸಿದರು.
ಹಡಪದ ಅಪ್ಪಣ್ಣನವರ ತತ್ವ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅನುಸರಿಸಬೇಕು ಎಂದು ಪ್ರೊ. ದಯಾನಂದಕುಮಾರ್ ಹೇಳಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಂಗಮೇಶ. ಎಸ್. ಗಣಿ ಅವರು ಮಾತನಾಡಿ, ಸವಿತಾ ಸಮಾಜದ ಆದ್ಯಪುರುಷ ಶ್ರೀ ಹಡಪದ ಅಪ್ಪಣ್ಣನವರು ಜಗಜ್ಯೋತಿ ಬಸವಣ್ಣ ಅವರ ಆಪ್ತಕಾರ್ಯದರ್ಶಿಯೂ ಆಗಿ ಕಾಯಕ ನಿಷ್ಠೆ ಮೆರೆದವರು. ಮಾಡುವ ಕಾಯಕದಲ್ಲಿ ಮೇಲು ಕೀಳು ಎಂಬ ತರತಮ ಇರಬಾರದು. ಕಾಯಕವನ್ನು ಶಿವಪೂಜೆ ಎಂದು ನಂಬಿ ನಡೆದುಕೊಂಡ ಅಪ್ಪಣ್ಣನವರು ಜನರಲ್ಲಿನ ಜಾತೀಯತೆ, ಮೂಢನಂಬಿಕೆ, ಅಂಧಶ್ರದ್ಧೆ ಇತ್ಯಾದಿ ಜಾಡ್ಯಗಳನ್ನು ತೊಲಗಿಸಲು ಪ್ರಯತ್ನಿಸಿದರು. ಎಲ್ಲ ವೃತ್ತಿಗಳೂ ಶ್ರೇಷ್ಠ ಎಂದು ಸಾರಿದ ಅವರು, ಕ್ಷೌರಿಕ ಸಮಾಜದ ಘನತೆಯನ್ನು ಎತ್ತಿಹಿಡಿದು ಮಾನವಕುಲದ ಮಹಿಮೆ ಮತ್ತು ಮಹತ್ವವನ್ನು ತಿಳಿಸಿದರು.
ಬಸವಾದಿ ಶರಣರ ಬದುಕು ಬರೆಹ, ತತ್ವಾದರ್ಶಗಳು ಮಾನವವಕುಲದ ಏಳಿಗೆಗೆ ಅವಶ್ಯ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯವುದು ಅಗತ್ಯವಿದೆ ಎಂದು ಡಾ. ಗಣಿ ಹೇಳಿದರು.
ಆರಂಭದಲ್ಲಿ ಶ್ರೀ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕಾಲೇಜಿನ ಶೈಕ್ಷಣಿಕ ವಿಭಾಗದ ಸಂಯೋಜಕರಾದ ಪಿ.ವಿ. ಶೇಷಸಾಯಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.
*****