ವಿಶ್ವದೆಡೆಗೆ ಒಂದು ಪ್ರಖರವಾದ ಹೊಸ ಕಣ್ಣು -ಸಿದ್ಧರಾಮ‌ಕೂಡ್ಲಿಗಿ

ವಿಶ್ವದೆಡೆಗೆ ಒಂದು ಪ್ರಖರವಾದ ಹೊಸ ಕಣ್ಣು

ಮಾನವನ ಕುತೂಹಲಕ್ಕೆ ಕೊನೆಯೆಂಬುದಿದೆಯೇ ? ಒಂದಾದ ನಂತರ ಮತ್ತೊಂದು ಎಂಬಂತೆ ಅವನ ಆಸಕ್ತಿ, ಕುತೂಹಲ ವಿಶ್ವದಷ್ಟೇ ವಿಸ್ತಾರವಾಗುತ್ತ ಹೋಗುತ್ತದೆ. ವಿಶ್ವದ ಉಗಮ, ಬೆಳವಣಿಗೆಯ ಬಗ್ಗೆ ಅತೀವವಾದ ಆಸಕ್ತಿಯನ್ನು ಹೊಂದಿರುವ ವಿಜ್ಞಾನಿಗಳು ಈಗ ಮತ್ತೊಂದು ಹೊಸ ದೂರದರ್ಶಕವೊಂದನ್ನು ಬಾಹ್ಯಾಕಾಶಕ್ಕೆ ತೇಲಿಬಿಟ್ಟಿದ್ದಾರೆ. ಅದು ವಿಶ್ವದೆಡೆಗೆ ಒಂದು ಹೊಸ ಕಣ್ಣಾಗಿದೆ.
ಮೊನ್ನೆ ತಾನೆ (ಜುಲೈ 12) ಅತ್ಯಂತ ಸ್ಪಷ್ಟವಾದ ಚಿತ್ರವೊಂದನ್ನು ಅದು ಭೂಮಿಗೆ ರವಾನಿಸಿತು. ಅದು ವಿಶ್ವದ ಚಿತ್ರ. ಚಿತ್ರವನ್ನು ಸೆರೆಹಿಡಿದುಕೊಟ್ಟಿದ್ದು ’ಜೇಮ್ಸ್ ವೆಬ್’ ಎಂಬ ದೂರದರ್ಶಕ. ಬಾಹ್ಯಾಕಾಶದಲ್ಲಿ ವಿಜ್ಞಾನಿಗಳಿಗಾಗಿ ಈಗ ಇದು ಕಾರ್ಯನಿರತವಾಗಿದೆ. ಸುತ್ತಲಿನ ವಿಶ್ವದತ್ತ ತನ್ನ ಪ್ರಖರ ಕಣ್ಣುಗಳನ್ನು ತಿರುಗಿಸುತ್ತ ಭೂಮಿಯ ಮೇಲಿನ ವಿಜ್ಞಾನಿಗಳಿಗೆ ’ನೋಡಿ ಹೀಗಿದೆ ವಿಶ್ವ’ ಎಂದು ತೋರಿಸುತ್ತಿದೆ. ನಮ್ಮ ಊಹೆಗೂ ಮೀರಿರುವ ವಿಶ್ವದಲ್ಲಿನ ಎಲ್ಲ ಆಗುಹೋಗುಗಳನ್ನು ಸೆರೆಹಿಡಿಯುವುದು ಇದರ ಕೆಲಸ. ಇದುವರೆಗೂ ಬಾಹ್ಯಾಕಾಶದ ಚಿತ್ರಗಳನ್ನು ’ಹಬಲ್’ ಎಂಬ ದೂರದರ್ಶಕ ಕೆಲಸ ಮಾಡುತ್ತಿತ್ತು. ಇದೀಗ ’ಜೇಮ್ಸ್ ವೆಬ್’ ಆ ಜವಾಬ್ದಾರಿಯನ್ನು ಹೊತ್ತಿದೆ. ಹಬಲ್ ಗಿಂತಲೂ ಸ್ಪಷ್ಟವಾದ ಚಿತ್ರಗಳನ್ನು ಹಾಗೂ ಶೀಘ್ರ ಗತಿಯಲ್ಲಿ ಚಿತ್ರಗಳನ್ನು ಸೆರೆಹಿಡಿಯುವುದು ಇದರ ವಿಶೇಷ. ಹಬಲ್ ಒಂದು ಚಿತ್ರವನ್ನು ಸೆರೆಹಿಡಿಯಲು 10 ದಿನಗಳನ್ನು ತೆಗೆದುಕೊಂಡರೆ ಇದು ಕೇವಲ 4 ದಿನಗಳಲ್ಲಿ ಸೆರೆಹಿಡಿಯುವಷ್ಟು ಕಾರ್ಯಕ್ಷಮತೆ ಇದೆ.

ಅಂದ ಹಾಗೆ ಇಲ್ಲಿ ಕೆಳಗೆ ಕೊಟ್ಟಿರುವ ಮೊದಲನೆಯ ಚಿತ್ರ ಜುಲೈ 12 ರಂದು ಪ್ರಥಮ ಬಾರಿಗೆ ಜೇಮ್ಸ್ ವೆಬ್ ಚಿತ್ರವನ್ನು ಕಳಿಸಿದ್ದು. ಇಲ್ಲಿರುವ ಚಿತ್ರ ಕಾಸ್ಮಿಕ್ ವಸ್ತುಗಳ ಚಿತ್ರ. ಅಂದರೆ ವಿಶ್ವ ರಚನೆಯ ಸಂದರ್ಭದಲ್ಲಿ ಉಂಟಾಗಿರುವ ವಿವಿಧ ವಿವಿಧ ವಸ್ತುಗಳ ಮೊತ್ತ. ಇಲ್ಲಿರುವ ವಸ್ತುಗಳು 13.1 ಮಿಲಿಯನ್ ವರ್ಷಗಳ ಹಿಂದಿನವು. ದೂರದರ್ಶಕದಲ್ಲಿ ಅವು ಈಗ ಸೆರೆಯಾಗಿವೆ.

ಇಲ್ಲಿರುವ ಮತ್ತೊಂದು ಚಿತ್ರ NGC 3324 ಎಂಬ ನೀಹಾರಿಕೆಯ ಚಿತ್ರ. ಇದರಲ್ಲಿಯೇ ನಕ್ಷತ್ರಗಳು ಸೃಷ್ಟಿಯಾಗುತ್ತವೆ. ಇದೊಂದು ರೀತಿಯಲ್ಲಿ ಸೃಷ್ಟಿಕರ್ತ ಇದ್ದಹಾಗೆ. ಅತ್ಯಂತ ಅದ್ಭುತವಾದ ಈ ಚಿತ್ರದಲ್ಲಿನ ನೀಹಾರಿಕೆ ಪರ್ವತ ಹಾಗೂ ಕಣಿವೆಯಾಕಾರಗಳನ್ನು ಹೊಂದಿದೆ. ಈ ನೀಹಾರಿಕೆಯಲ್ಲಿ ಅತಿ ಎತ್ತರದ ಪರ್ವತದಂತೆ ಕಾಣುವ ಇದರ ಎತ್ತರವೆ 7 ಬೆಳಕಿನ ವರ್ಷಗಳಷ್ಟಿದೆ. (ಬೆಳಕು ಒಂದು ಸೆಕೆಂಡಿಗೆ 3 ಲಕ್ಷ ಕಿ.ಮೀ ಚಲಿಸುತ್ತದೆ. ಅದು ಒಂದು ವರ್ಷ ಚಲಿಸಿದ ಅದು ಒಂದು ಬೆಳಕಿನ ವರ್ಷ ಎಂದರ್ಥ) ಇದು ನಮ್ಮ ಕಲ್ಪನೆಗೂ ಮೀರಿದ್ದು. ಇಲ್ಲಿ ಉಂಟಾಗಿರುವ ಪರ್ವತಾಕಾರಗಳು ಐಯೋನೈಸ್ಡ್ ಗ್ಯಾಸ್ ಮತ್ತು ಬಿಸಿಯಾದ ಧೂಳಿನಿಂದ ಆವೃತವಾದದ್ದು. ಇಲ್ಲಿಯೇ ನಕ್ಷತ್ರಗಳು ಉಗಮವಾಗುತ್ತವೆ, ವಿಶ್ವ ವಿಸ್ತಾರವಾಗುತ್ತಾ ಹೋಗುತ್ತದೆ.

ಅಂದ ಹಾಗೆ ಈ ಜೇಮ್ಸ್ ವೆಬ್ ದೂರದರ್ಶಕವನ್ನು ನಾಸಾ (National Aeronautics Space Administration) ವಿವಿಧ ದೇಶಗಳ ಸಹಕಾರದೊಂದಿಗೆ ಸಿದ್ಧಪಡಿಸಿದೆ. 1960ರಿಂದ 1968ರವರೆಗೆ ನಾಸಾದ ಮುಖ್ಯಸ್ಥರಾಗಿದ್ದ ಜೇಮ್ಸ್ ವೆಬ್ ಅವರ ಹೆಸರನ್ನೇ ಈ ದೂರದರ್ಶಕಕ್ಕೆ ನಾಮಕರಣ ಮಾಡಲಾಗಿದೆ. ಜನವರಿ 2022ಕ್ಕೆ ಫ್ರೆಂಚ್ ಗಯಾನಾದಿಂದ ಇದನ್ನು ಕಕ್ಷೆಗೆ ಸೇರಿಸಲಾಯಿತು. ಜುಲೈ 12ರಿಂದ ಈ ದೂರದರ್ಶಕ ಚಿತ್ರಗಳನ್ನು ರವಾನಿಸುತ್ತಿದೆ. ಭೂಮಿಯಿಂದ 1.5 ಮಿಲಿಯನ್ ಕಿ.ಮೀ.ನಷ್ಟು ದೂರದಲ್ಲಿ ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಸಿದ್ಧಪಡಿಸಲು 10 ಬಿಲಿಯನ್ ಡಾಲರ್ ನ್ನು ವೆಚ್ಚ ಮಾಡಲಾಗಿದ್ದು ಸುಮಾರು 10 ವರ್ಷಗಳವರೆಗೂ ಇದು ಬಾಹ್ಯಾಕಾಶದಲ್ಲಿ ವಿಜ್ಞಾನಿಗಳ ಕುತೂಹಲಕ್ಕೆ ಕಣ್ಣಾಗಲಿದೆ.

ವಿಶ್ವದೆಡೆಗೆ ಎಷ್ಟೊಂದು ಆಸಕ್ತಿಯಿಂದ ನೋಡುವ ನಾವು ನಮ್ಮ ಮನಸಿನ ವಿಶ್ವವನ್ನು ಅರಿಯಲೇ ಆಸಕ್ತಿಯನ್ನು ಕಳೆದುಕೊಂಡುಬಿಟ್ಟಿರುವುದೇ ದೊಡ್ದ ದುರಂತ.

-ಸಿದ್ಧರಾಮ ಕೂಡ್ಲಿಗಿ
(ಚಿತ್ರ ಮಾಹಿತಿ : ಅಂತರ್ಜಾಲದಿಂದ)