ಬಳ್ಳಾರಿ, ಜು.21: ನಗರದ ಬಳ್ಳಾರಿ ಸೇವಾ ಸಂಸ್ಥೆ ಪ್ರತಿ ವರ್ಷದಂತೆ ಸರಕಾರಿ ಶಾಲೆಯ ಎಂಟನೂರು ಮಕ್ಕಳಿಗೆ ಉಚಿತವಾಗಿ ಪುಸ್ತಕ, ಪೆನ್ಸಿಲ್, ಪೆನ್ನು, ಬ್ಯಾಗ್ ಮತ್ತಿತರ ಪರಿಕರಗಳನ್ನು ವಿತರಿಸಿ ಗಮನ ಸೆಳೆದಿದೆ.
ತಾಲೂಕಿನ ಹಲ್ಕುಂದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ನಗರದ ಅಂದ್ರಾಳ್ ಸಹಿಪ್ರಾ ಶಾಲೆಯ ಮಕ್ಕಳಿಗೆ ಸೇವಾ ಸೇವಾ ಸಂಸ್ಥೆಯ ಅಧ್ಯಕ್ಷ ಸುರೇಂದ್ರ ಕುಮಾರ್ ಬಾಪ್ನ ಅವರ ನೇತೃತ್ವದಲ್ಲಿ ಮಂಗಳವಾರ ಪುಸ್ತಕ ಪರಿಕರಿಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಅವರು ಮಾತನಾಡಿ, ಸರಕಾರಿ ಶಾಲೆಯ ಹೆಚ್ಚಿನ ಮಕ್ಕಳು ಬಡವರಾಗಿದ್ದರೂ ಜೀವನದಲ್ಲಿ ದೊಡ್ಡ ಸಾಧನೆ ಮಾಡುವ ಛಲವುಳ್ಳವರಾಗಿದ್ದಾರೆ ಎಂದು ಹೇಳಿದರು.
ಪಠ್ಯದ ಜತೆ ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಮುಖಂಡ ವಿ.ರಾಮಚಂದ್ರ ಅವರು ಮಾತನಾಡಿ,
ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು
ಪಾಲಕರು ಮತ್ತು ಗುರುಗಳ ಮಾರ್ಗದರ್ಶನ ಅತ್ಯಗತ್ಯ ಎಂದರು.
ಸರಕಾರಿ ಶಾಲೆಗಳಲ್ಲಿ ಕಲಿತ ಸಾವಿರಾರು ಜನ ಡಿಸಿ, ಎಸ್.ಪಿ ಗಳಾಗಿದ್ದಾರೆ. ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಯಶಸ್ಸು ಖಂಡಿತ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಸತ್ಯನಾರಾಯಣ, ಮುಖಂಡರಾದ ಜೆ.ಸಿ. ನಾಗೇಶ್, ಅಂದ್ತಾಳ್ ಸಹಿಪ್ರಾ ಶಾಲೆಯ ಮುಖ್ಯಗುರು ತಿಪ್ಪೇಸ್ವಾಮಿ, ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ಗ್ರಾಮದ ಮುಖಂಡ ಶೇಷಣ್ಣ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕಿ ಮಂಜುಳಾ ಪ್ರಾರ್ಥಿಸಿದರು. ಪ್ರಭಾರಿ ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ ಕಾಳೆ ಸ್ವಾಗತಿಸಿದರು. ಶಿಕ್ಷಕಿ ಹೊನ್ನೂರಮ್ಮ, ಅಡುಗೆ ಸಹಾಯಕಿ ಹೇಮಾವತಿ ನಿರ್ವಹಿಸಿದರು.
*****