ಹಿರಿಯ ಪತ್ರಕರ್ತರ ಪ್ರಾಮಾಣಿಕತೆ, ಸಾಮಾಜಿಕ ಬದ್ಧತೆ, ಬದುಕು ಯುವಕರಿಗೆ ಮಾದರಿ -ಕಕಾನಿಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು

ಬಳ್ಳಾರಿ, ಜು.31: ತಮ್ಮ ಪ್ರಾಮಾಣಿಕತೆ, ಸಾಮಾಜಿಕ‌ ಬದ್ಧತೆ, ನಡತೆಯಿಂದ ಹಿರಿಯ ಪತ್ರಕರ್ತರು ಪತ್ರಿಕೋದ್ಯಮ ಪ್ರವೇಶಿಸುವ ಯುವ ಪತ್ರಕರ್ತರಿಗೆ ಆದರ್ಶಪ್ರಾಯರಾಗಿರಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕ ಭಾನುವಾರ ಸಂಜೆ ನಗರದ ಪತ್ತಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು‌ ಮಾತನಾಡಿದರು.


ಪ್ರಜಾಪ್ರಭುತ್ವದಲ್ಲಿ  ಪತ್ರಿಕಾರಂಗವನ್ನು ನಾಲ್ಕನೆಯ ಅಂಗವೆಂದು ಗೌರವಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ
ಪತ್ರಕರ್ತರ ಜವಾಬ್ದಾರಿಯೂ ಹೆಚ್ಚಿದೆ. ಬದ್ಧತೆಯಿಂದ‌ ಸಮಾಜಮುಖಿಗಳಾಗಿ ಕಾರ್ಯನಿರ್ವಹಿಸಬೇಕು. ಹಿರಿಯ ಪತ್ರಕರ್ತರ ಪ್ರಾಮಾಣಿಕತೆ, ಸಾಮಾಜಿಕ ಬದ್ಧತೆ, ಬದುಕು ಕಿರಿಯ ಪತ್ರಕರ್ತರಿಗೆ ಮಾದರಿಯಾಗಿರಬೇಕು ಎಂದು ತಿಳಿಸಿದರು.
ಮಹಾತ್ಮಗಾಂಧಿ, ಡಾ. ಬಿ ಆರ್ ಅಂಬೇಡ್ಕರ್ ಅವರಂತಹ ಮಹಾಪುರುಷರು ಪತ್ರಕರ್ತರಾಗಿದ್ದರು. ತಮ್ಮ ಹೋರಾಟ, ಚಳುವಳಿಯ ಜತೆಗೂ  ಪತ್ರಕರ್ತರಾಗಿಯೂ ಗಮನಸೆಳೆದಿದ್ದರು. ಇವರ ಆದರ್ಶವನ್ನು ನಾವೆಲ್ಲಾ ಪತ್ರಕರ್ತರು ಅಳವಡಿಸಿ ಕೊಳ್ಳಬೇಕಿದೆ ಎಂದರು.
ಸತ್ಯದ ದಾರಿಯಲ್ಲಿರುವ ಯಾವುದೇ ಸಂಘಟನೆಗಳು ಹೆದರುವ ಅಗತ್ಯವಿಲ್ಲ. 90ವರ್ಷ ಇತಿಹಾಸವಿರುವ ಪತ್ರಕರ್ತರ ಸಂಘ ಕಾರ್ಯ ಮರೆತವರನ್ನು, ದಂಧೆ ಮಾಡುವವರನ್ನು ಸಹಿಸುವುದಿಲ್ಲ ಎಂದು ಹೇಳಿದರು.
ಸಮಾಜದ ಕನ್ನಡಿಯಾಗಿ ಕಾರ್ಯನಿರ್ವಹಿಸುವ ಪತ್ರಿಕೆಗಳು, ಪತ್ರಕರ್ತರು ಸಾರ್ವಜನಿಕರ ವಿಶೇಷ ಪ್ರೀತಿ ಗಳಿಸುತ್ತಾರೆ.  ಬ್ಲಾಕ್ ಮೇಲ್‌ ಮಾಡುವ,  ದಿಢೀರ್ ಶ್ರೀಮಂತ ರಾಗುವ ದುರುದ್ದೇಶವನ್ನಿಟ್ಟು ಕೊಂಡು ಶ್ರೇಷ್ಠ ಪತ್ರಿಕಾರಂಗಕ್ಕೆ ಬರುವ ಅಗತ್ಯವಿಲ್ಲ. ಇಂತಹವರ ಬಗ್ಗೆ ಸಮಾಜ, ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಕಣ್ಣಿಟ್ಟಿರಬೇಕು ಎಂದು ಸಲಹೆ ನೀಡಿದರು.
ರಾತ್ರಿ ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿ 24ಗಂಟೆ ಒಳಗೆ ಲೊಗೋ ಹಿಡಿದು ಬರುವ ದುರುದ್ದೇಶಹೊಂದಿದವರ ಬಗ್ಗೆಯೂ ಸಮಾಜ ಎಚ್ಚರದಿಂದ‌ ಇರಬೇಕು. ಸದುದ್ದೇಶ, ಪತ್ರಿಕಾರಂಗದ ತತ್ವಾದರ್ಶಗಳನ್ನು ಎತ್ತಿ‌ಹಿಡಿಯುವ, ನ್ಯಾಯಮಾರ್ಗದಲ್ಲಿ ಸೇವೆ ಸಲ್ಲಿಸುವವರಿಗೆ ಪ್ರೋತ್ಸಾಹ ದೊರೆಯಬೇಕು ಎಂದು ಹೇಳಿದರು.


ಸಂಘದ ಪ್ರಧಾನ ‌ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಅವರು ಮಾತನಾಡಿ ಕೊವೀದ್ ನಿಂದ ನಿಧನರಾದ ರಾಜ್ಯದ ನೂರಕ್ಕೂ ಹೆಚ್ಚು ಪತ್ರಕರ್ತರಿಗೆ ಅಧ್ಯಕ್ಷ ಶಿವಾನಂದ ತಗಡೂರು ಅವರು ಆರ್ಥಿಕ ಸಹಾಯ ಒದಗಿಸಲು ತುಂಬಾ  ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ರಾಜೇಶ್ವರಿ ಸುಬ್ಬರಾಯುಡು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಯ, ನಗರ ಶಾಸಕರ ಜತೆ ಚರ್ಚಿಸಿ ನಗರದ‌ಲ್ಲಿ‌ ಪತ್ರಕರ್ತರಿಗೆ ನಿವೇಶನ ನೀಡಲು ಪ್ರಯತ್ನಿಸಲಾಗುವುದು. ಶೀಘ್ರ ಲ್ಯಾಪ್ ಟಾಪ್ ಗಳನ್ನು ವಿತರಿಸಲು ಕ್ರಮ‌ಕೈಗೊಳ್ಳಲಾಗುವುದು ಎಂದರು.
ಅದ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷ,  ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ‌ಗೌಡ ಮತ್ತಿತರರು  ಮಾತನಾಡಿದರು.
ವಾರ್ತಾ ಇಲಾಖೆಯ ಹಿರಿಯ ಸಹಾಯಕ‌ ನಿರ್ದೇಶಕ ಕೆ. ರಾಮಲಿಂಗಪ್ಪ, ಪಾಲಿಕೆ ಸದಸ್ಯರಾದ ಪಿ.ಗಾದೆಪ್ಪ, ರಾಮಾಂಜನೇಯುಲು, ಮಿಂಚು ಶ್ರೀನಿವಾಸ್, ಸಂಘದ ರಾಜ್ಯ ಸಮಿತಿ ಸದಸ್ಯ ಎನ್. ವೀರಭದ್ರಗೌಡ, ಜಿಲ್ಲಾ ಪ್ರದಾನ ಕಾರ್ಯದರ್ಶಿ ವಾರ್ತಾ ರವಿ ಮತ್ತಿತರ ಪದಾಧಿಕಾರಿಗಳು, ಸದಸ್ಯರು, ವಿವಿಧ ಪತ್ರಿಕೆಗಳ ವರದಿಗಾರರು ಉಪಸ್ಥಿತರಿದ್ದರು.


ಸನ್ಮಾನ: ಇದೇ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆ ಯಲ್ಲಿ ಉತ್ತಮ‌ ಅಂಕಗಳಿಸಿದ ಪತ್ರಕರ್ತ ಎಚ್ ಎಂ ಮಹೇಂದ್ರ ‌ಕುಮಾರ್ ಅವರ ಪುತ್ರಿ ಹೆಚ್.ಎಂ ಅಕ್ಷತಾಳನ್ಮು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಪತ್ರಕರ್ತ, ಕವಿ ಇಮಾಮ್ ಗೊಡೇಕರ್ ನಿರೂಪಿಸಿದರು.
*****