ಅನುದಿನ ಕವನ-೫೮೨, ಕವಿ: ಎ.ಎನ್. ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ಆರಾಧನೆ…!

“ಬರೆಯುತ್ತಲೇ ಅತ್ಯಂತ ಖುಷಿ ಕೊಟ್ಟ ಕವಿತೆ. ಓದಿ ನೋಡಿ.. ಮುದ ನೀಡಿ ನಿಮ್ಮ ಹೃನ್ಮನಗಳನ್ನು ಪುಳಕಗೊಳಿಸುತ್ತದೆ. ಇಲ್ಲಿ ಹೃದ್ಯ ಬಂಧಗಳ ಸೌಂದರ್ಯದ ಅನಾವರಣವಿದೆ. ಅನನ್ಯ ಅನುಬಂಧಗಳ ಮಾಧುರ್ಯದ ರಿಂಗಣವಿದೆ. ಅವಿನಾಭಾವ ಆಂತರ್ಯಗಳ ಅಂತಃಕರಣ ಹೂರಣವಿದೆ. ಓದಿ…ಪ್ರತಿಕ್ರಿಯಿಸುವಿರಾ..?”

– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇


ಆರಾಧನೆ..!

ನೆನೆಯುತ್ತೇನೆ ಗೆಳೆಯಾ
ಸಂಭ್ರಮದಿ ಮುಗಿಲಾದುದಕ್ಕಲ್ಲ..
ಸಂಕಟದಿ ಹೆಗಲಾದುದಕ್ಕೆ.!

ಅಭಿಮಾನಿಸುತ್ತೇನೆ ಗೆಳೆಯಾ
ಗೆದ್ದುಬೀಗುವಾಗ ಬೆನ್ತಟ್ಟಿದ್ದಕ್ಕಲ್ಲ..
ಸೋತುಕುಸಿದಾಗ ಕೈಹಿಡಿದದ್ದಕ್ಕೆ.!

ವಂದಿಸುತ್ತೇನೆ ಗೆಳೆಯಾ
ಒಪ್ಪುಗಳ ಹೇಳಿಕೊಟ್ಟಿದ್ದಕ್ಕಲ್ಲ..
ತಪ್ಪುಗಳ ತಿಳಿಸಿಕೊಟ್ಟಿದ್ದಕ್ಕೆ.!

ಅಭಿನಂದಿಸುತ್ತೇನೆ ಗೆಳೆಯಾ
ಸದ್ಗುಣಗಳ ಮೆಚ್ಚಿಕೊಂಡಿದ್ದಕ್ಕಲ್ಲ..
ದುರ್ಗುಣಗಳ ಸಹಿಸಿಕೊಂಡಿದ್ದಕ್ಕೆ.!

ಆರಾಧಿಸುತ್ತೇನೆ ಗೆಳೆಯಾ
ಸಿರಿಯಿದ್ದಾಗ ಸನಿಹವಿದ್ದುದಕಲ್ಲ..
ಸೂತಕವಿದ್ದಾಗ ಜೊತೆಯಾದುದಕ್ಕೆ.!

ನಮಸ್ಕರಿಸುತ್ತೇನೆ ಗೆಳೆಯಾ
ನನ್ನತನವ ದೂರದಿದ್ದುದಕಲ್ಲ..
ನಿನ್ನತನವ ಹೇರದಿದ್ದುದಕೆ.!

ಆದರಿಸುತ್ತೇನೆ ಗೆಳೆಯಾ
ಅಡಿಗಡಿಗೂ ಆಸರೆಯಾದದ್ದಕ್ಕಲ್ಲ..
ಅಂತಃಶಕ್ತಿ ತುಂಬಿ ಮುನ್ನಡೆಸಿದ್ದಕ್ಕೆ.!

ಬಯಸುತ್ತೇನೆ ಗೆಳೆಯಾ
ನೀನನ್ನ ನೆರಳಿನಂತಿರಬೇಕೆಂದಲ್ಲ..
ನಾನಿನ್ನ ಕೊರಳಿನಲ್ಲಿರಬೇಕೆಂದು.!

-ಎ.ಎನ್.ರಮೇಶ್. ಗುಬ್ಬಿ.
*****