ಅನುದಿನ‌ ಕವನ-೫೮೪, ಕವಯತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಜಲ್

ಗಜಲ್

ಪರಿತಪಿಸಿ ಪ್ರಲಾಪಿಸುತಿರುವೆ
ಬದಲಿಸು ನಿನ್ನ ನಿಲುವ
ನೊಂದು ಬೆಂದು ಬೇಯುತಲಿರುವೆ
ಬದಲಿಸು ನಿನ್ನ ನಿಲುವ

ಕಾಡಿಬೇಡಿ ಬಳಲುತ್ತಲಿರುವೆ
ಕನಸ ಕರುಣಿಸು ಕೆಲವು
ಕಿಡಿ ನೋಟದಿ ದುರುಗುಟ್ಟಿದರೂ ಸರಿಯೇ
ಬದಲಿಸು ನಿನ್ನ ನಿಲುವ

ಪಾಪ ಪುಣ್ಯ ಸುಖ ದುಃಖಗಳ
ಲೆಕ್ಕ ಹಾಕುತ ಕೂಡುವದೇಕೆ
ಒಲಿದುದ ಸ್ವೀಕರಿಸಿ ಬಿಡು
ಬದಲಿಸು ನಿನ್ನ ನಿಲುವ

ಕದಡಿದ ಮನವ ಓದಲಾದೀತೆ
ತಿರೆಯಲುತ್ತಮವೆನಿಸಿದ
ರವಿತೇಜ ಮುಖನೆ ಒಮ್ಮೆ
ಬದಲಿಸು ನಿನ್ನ ನಿಲುವ

ಅಮರ್ತ್ಯ ಮಾರ್ಗದಿ ಅಮೂರ್ತನಾಗಿ
ಅವಿರ್ಭವಿಸಿ ಅಡಗಿರುವೆಯಲ್ಲ
ಮುಚ್ಚಿಟ್ಟು ಪೂಜಿಸುವೆ ದೇವ ಮೂರುತಿಯೇ
ಬದಲಿಸು ನಿನ್ನ ನಿಲುವ

ಅಷ್ಟ ಮದದಿ ಮೆರೆಯದಂತೆ
ಮನದಂದಣವನೇರಿ ಕೂತು
ಪ್ರೇಮದೂರಿಗೆ ಮೆರವಣಿಗೆ ಸಾಗಲು
ಬದಲಿಸು ನಿನ್ನ ನಿಲುವ

ಪರಿಣತ ಪ್ರಕಾಶ ಪ್ರಬೋಧನೆ
ಪ್ರವಹಿಸು ರತುನಳ ಮನದೊಳಗೆ
ಅಂತರಾಳದ ಇಂಗಿತವ ಅರಿತು
ಬದಲಿಸು ನಿನ್ನ ನಿಲುವ

-ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ
*****