ಅನುದಿನ ಕವನ-೫೮೮, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ:ಕಳೆದು ಹೋದವು ಎಪ್ಪತ್ತೈದು ವರುಷಗಳು

ಕಳೆದು ಹೋದವು ಎಪ್ಪತ್ತೈದು ವರುಷಗಳು

ಕಳೆದು ಹೋದವು ಎಪ್ಪತ್ತೈದು ವರುಷಗಳು,
ಹರೆಯಸಂದವಳಾಗಿ ನರೆಗೂದಲ, ಮುದುಕಿಯಾದ ಭಾರತಮ್ಮನಿಗೆ,
ಕಳೆದು ಹೋದವು ಎಪ್ಪತ್ತೈದು ವರುಷಗಳು.

ವೈಚಾರಿಕತೆಗೆ ನಿಲುಕದ ಆಚರಣೆಗಳಲ್ಲಿ,
ಭೌದ್ಧಿಕ ಬೆಳವಣಿಗೆಗೆ ಬೇಕಾಗದ ಬುದ್ಧಿ ಪ್ರದರ್ಶಕರ ವೇದಿಕೆಯಲ್ಲಿ,
ಆರ್ಥಿಕ ನೆಲಗಟ್ಟುಗಳ ಮೇಲೆ ದಾಳಿಯಿಕ್ಕುವ ದಾಂಡಿಗತನದ ತೋಳಲ್ಲಿ
ಕಳೆದು ಹೋದವು ಎಪ್ಪತ್ತೈದು ವರುಷಗಳು.

ಸಾಮಾಜಿಕ ಸಮಾನತೆಯ ಕಾಣಿಸದ, ಕಣ್ಮಣಿಗಳೆನಿಸಿಕೊಳ್ಳುವ ತಾರೆಯರು
ತುಂಬಿರುವ ಕಾಲಗಳಲ್ಲಿ ದೇಶಗಳಲ್ಲಿ ವ್ಯಕ್ತಿಗಳಲ್ಲಿ, ಭಾರತವ್ವನ ಆಯಸ್ಸು ಸಿಲುಕಿ ನರುಕಿ,
ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿರುವ ಜನತೆಯೊಂದಿಗೆ,
ಕಳೆದು ಹೋದವು ಎಪ್ಪತ್ತೈದು ವರುಷಗಳು.

ಭರತಮ್ಮನ ಭವ್ಯ ಬಾಳು ಬಾಯಿಬಡುಕರ ಬಾಯಲ್ಲಿ,
ದಿವ್ಯ ಜೀವನವ ಮಾರುವ ಕಾಸಿಗೆ ಗುರುಗಳಾದವರ ಕೈಯಲ್ಲಿ,
ನರಳಿ ನಡುಗಿ ಭಾರತಮಾತೆಯ ಆಯಸ್ಸು
ಕಳೆದು ಹೋದವು ಎಪ್ಪತ್ತೈದು ವರುಷಗಳು.

ಕಳೆದು ಹೋದವು ಎಪ್ಪತ್ತೈದು ವರುಷಗಳು,
ಕಳೆದು ಹೋದವು ಎಪ್ಪತ್ತೈದು ವರುಷಗಳು,
ದುರುಳರು ದುಷ್ಟರು ದುಶ್ಯಾಸನರು ಹೊತ್ತ,
ಪಲ್ಲಕ್ಕಿಯಲ್ಲಿ ನರಕಯಾತನೆಯಲ್ಲಿ ಮುಲುಗುತ್ತಾ.

– ಮನಂ, ಬೆಂಗಳೂರು
*****