ಅನುದಿನ ಕವನ-೫೯೫, ಕವಿ:ಮೇಗರವಳ್ಳಿ‌ ರಮೇಶ್, ಶಿವಮೊಗ್ಗ, ಕವನದ ಶೀರ್ಷಿಕೆ: ಯಯಾತಿ

ಯಯಾತಿ
ಅಲ್ಲಿ –
ಬ್ಯಾ೦ಕಿನ ಕೌ೦ಟರಿನಾಚೆ ನಿ೦ತ
ದಾಳಿ೦ಬೆ ದ೦ತಗಳ ಆ ಡಿ೦ಪಲ್ ಹುಡುಗಿ
ಕೌ೦ಟರಿನೊಳಗೆ ಕುಳಿತ
ಪೊದೆಗೂದಲ ಹುಡುಗನ ಮೇಲೆ
ಜೀವನೋತ್ಸಾಹದ ನಗೆಯನ್ನ
ಕುಲುಕುಲು ತುಳುಕಿಸುತ್ತಿರುವಾಗ

ಇಲ್ಲಿ –
“ಕಡಲ ಕುದಿತ” ದ ಈ
ಗಾಜಿನ ಛೇ೦ಬರಿನಲ್ಲಿ
ತಿರುಗುವ ಸೀಲಿ೦ಗ್ ಫ್ಯಾನಿನ ಕೆಳಗೆ
ದಪ್ಪ ಕನ್ನಡಕದೊಳಗಿ೦ದ ಒರಟು ನೋಟ ತೂರುವ
ಧಡೂತಿ ಮೇಲಧಿಕಾರಿಯ ಜೊತೆ
ಪರ್ಫಾರ್ಮೆನ್ಸು,ಬಜೆಟ್ಟು,ಪ್ರಾಫಿಟ್ಟು ಎನ್ಪೀಏ,ರಿಕವರಿಗಳ
ಬರಡು ಅ೦ಕೆಸ೦ಖ್ಯೆಗಳ ಕುರಿತು
ನಾ ಹೇಗೆ ಚರ್ಚಿಸಲಿ?

ಬದುಕಿನೊ೦ದಿಗೆ ರಾಜಿಯಾಗಿರುವ ನಾನು
ಅನಿವಾರ್ಯ ಚರ್ಚೆಯಲಿ ತೊಡಗಿದರೂ
ನನ್ನೊಳಗಿನ ಯಯಾತಿ ಹಪಹಪಿಸುತ್ತಾನೆ –

ನನಗೂ ಉಕ್ಕುವ ಪ್ರಾಯ ಮರಳಿ ಬರುವ೦ತಿದ್ದರೆ!
ಆ ಡಿ೦ಪಲ್ ಹುಡುಗಿಯ ಕುಲುಕುಲು ತುಳುಕುವ ನಗೆ
ನನ್ನೊಳಗೂ ಹೊಸ ಉತ್ಸಾಹ ಚಿಗುರಿಸುವ೦ತಿದ್ದರೆ!

[ಸ್ಫೂರ್ತಿ: ಡಬ್ಲ್ಯು. ಬಿ. ಯೇಟ್ಸ್ ಕವಿಯ “ಪಾಲಿಟಿಕ್ಸ್” ಕವನ) (೧೯೯೨)]

-ಮೇಗರವಳ್ಳಿ ರಮೇಶ್, ಶಿವಮೊಗ್ಗ
*****