ಇಂದು(ಆ. 19) ವಿಶ್ವ ಛಾಯಾಗ್ರಹಣ ದಿನ. ಸಾವಿರ ಪದಗಳಿಗೆ ಒಂದು ಚಿತ್ರ ಸಮ ಎಂಬ ಮಾತು ಸುಳ್ಳಲ್ಲ ಎಂಬುದನ್ನು ಛಾಯಾಗ್ರಹರು ತಮ್ಮ ಪ್ರತಿಭೆ, ಅನನ್ಯ ಆಸಕ್ತಿ, ಶ್ರಮದಿಂದ ಸಾಬೀತು ಪಡಿಸುತ್ತಲೇ ಬಂದಿದ್ದಾರೆ. ಕೊಪ್ಪಳ ಮತ್ತು ಅವಿಭಜಿತ ಬಳ್ಳಾರಿ ಜಿಲ್ಲೆಯ ಪ್ರತಿಭಾಶಾಲಿ ಛಾಯಾಗ್ರಾಹಕರು ರಾಜ್ಯ, ರಾಷ್ಟ್ರ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದ್ದಾರೆ. ಈ ಮೂಲಕ ಉಭಯ ಜಿಲ್ಲೆಗಳಿಗೂ ಕೀರ್ತಿ ತಂದಿದ್ದಾರೆ. ಈ ಪ್ರತಿಭಾವಂತರ ಬಗ್ಗೆ ಮೂರು ವರ್ಷಗಳ ಹಿಂದೆ ಹಿರಿಯ ಪತ್ರಕರ್ತ ಚಾಮರಾಜ ಸವಡಿ ಅವರು ವಿಶ್ವ ಛಾಯಾಗ್ರಹಣ ದಿನಾಚರಣೆ ಶುಭಾಶಯ ಕೋರಲು ಬರೆದ
‘ಕಾಲನ ಸೆರೆ ಹಿಡಿದವರಿಗೆ ಸಾವಿರ ಶರಣು’
ಬರಹ ಸಕಾಲಿಕವಾಗಿದೆ. ಈ ಶುಭ ಸಂದರ್ಭದಲ್ಲಿ ‘ಕರ್ನಾಟಕ ಕಹಳೆ ಡಾಟ್ ಕಾಮ್’ ಮತ್ತೇ ಪ್ರೀತಿಯಿಂದ ಪ್ರಕಟಿಸುತ್ತದೆ.
*****
ಎಲ್ಲಾ ಛಾಯಾಗ್ರಾಹಕರಿಗೂ, ಛಾಯಾಚಿತ್ರ ಪ್ರೇಮಿಗಳಿಗೂ ವಿಶ್ವ ಛಾಯಾಗ್ರಹಣ ದಿನಾಚರಣೆ ಶುಭಾಶಯಗಳು.
(ಸಂಪಾದಕರು)👇
.
ಕಾಲನ ಸೆರೆ ಹಿಡಿದವರಿಗೆ ಸಾವಿರ ಶರಣು
‘ಕಾಣುತ್ತಲ್ಲ?’
ಕೇಳಿದರು ಪ್ರಕಾಶ ಕಂದಕೂರ.
‘ಇಲ್ಲ’ ಅಂದೆ.
ಕೊರಳಿಗೆ ಹಾಕಿಕೊಂಡಿದ್ದ ಕ್ಯಾಮೆರಾದ ಪಟ್ಟಿ ತೆಗೆದು ನನ್ನ ಕೊರಳಿಗೆ ನೇತು ಹಾಕಿ, ಕ್ಯಾಮೆರಾ ಜೂಮ್ ಮೂಲಕ ನೋಡಲು ಹೇಳಿದರು.
ಸಣ್ಣ ಕಾಲುವೆಯಲ್ಲಿ ಹರಿಯುತ್ತಿದ್ದ ನೀರಿನೊಳಗಿದ್ದ ಸಂದಿಯಿಂದ ಟಿಸಿಲೊಡೆದ ಎಳೆಗಳಂತಿದ್ದ ನಾಲಿಗೆ ಕಂಡಿತು. ದೃಷ್ಟಿ ತಿಳಿಯಾದಂತೆ, ಮಂದ ಬೆಳಕಿನಲ್ಲಿ ಕಂಡಿದ್ದು ನಾಲಿಗೆ ಒಳಗೆಳೆದು, ಹೊರಬಿಡುತ್ತಿದ್ದ ಸರೀಸೃಪ.
ನಾಗರಹಾವು!
ನನ್ನ ಫೊಟೊಗ್ರಫಿ ಹುಚ್ಚು ಟಿಸಿಲೊಡೆದಿದ್ದು ಹೀಗೆ.
ಕೊಪ್ಪಳದ ಹೊರವಲಯದ ಮಳೆಮಲ್ಲಪ್ಪ ದೇಗುಲದಲ್ಲಿ ಸದಾ ಹರಿಯುವ ನೀರಿನ ಪುಟ್ಟ ಕಾಲುವೆಯ ಒಳಗಿದ್ದ ನಾಗರಹಾವನ್ನು ಅದೇ ಮೊದಲ ಬಾರಿ ಜೂಮ್ ಲೆನ್ಸ್ ಮೂಲಕ ನೋಡಿದ್ದ ನನ್ನ ಸಡಗರ ವರ್ಣಿಸಲು ಸಾಧ್ಯವಿಲ್ಲ. ತೆಗೀರಿ ಫೊಟೊ ಎಂದಿದ್ದೆ.
ಆಗೆಲ್ಲ ಫಿಲಂ ರೋಲ್ ಕ್ಯಾಮೆರಾಗಳು. ಬಹುಶಃ ಐದಾರು ಫೊಟೊ ತೆಗೆದಿರಬೇಕು. ಒಂದು ವಾರದ ನಂತರ, ಹುಬ್ಬಳ್ಳಿಯಲ್ಲಿ ಸಂಸ್ಕರಣಗೊಂಡು ಅಚ್ಚಾಗಿ ಬಸ್ ಮೂಲಕ ಅವು ಬಂದಾಗ, ಕನ್ಯೆಯ ಫೊಟೊ ನೋಡಲು ಹೊರಟವನಂತೆ ಗಡಿಯಾರ ಕಂಬದ ಹತ್ತಿರ ಇದ್ದ ಪ್ರಕಾಶ ಕಂದಕೂರ ಸ್ಟುಡಿಯೋಗೆ ಸಡಗರದಿಂದ ಹೋಗಿದ್ದೆ. ಹಾವಿನ ಚಿತ್ರ ಸ್ಪಷ್ಟವಾಗಿ ಮೂಡಿದ್ದು ಕಂಡು ಮೆಚ್ಚಿದ ಕನ್ಯೆ ಹೂಂ ಅಂದಷ್ಟೇ ಹಿಗ್ಗಾಗಿತ್ತು.
ಆ ಫೊಟೊ ಜೊತೆಗೆ ಪುಟ್ಟ ಬರಹವೊಂದನ್ನು ಪ್ರಜಾವಾಣಿ ಪತ್ರಿಕೆಗೆ ಕಳಿಸಿದ್ದೆವು. ‘ನಿರ್ಲಿಪ್ತ ನಾಗರ’ ಶೀರ್ಷಿಕೆಯಡಿ ಅದು ಆಗಿನ ‘ನಾಡು ನಾಡಿ’ ಎಂಬ ಸಾಪ್ತಾಹಿಕ ಅಂಕಣದಲ್ಲಿ ಪ್ರಕಟವೂ ಆಯಿತು. ಅಲ್ಲಿಂದ ಶುರುವಾದ ಫೊಟೊ ಮತ್ತು ಬರವಣಿಗೆ ಹುಚ್ಚು ಇಪ್ಪತ್ತು ವರ್ಷಗಳ ನಂತರವೂ ಹಾಗೇ ಉಳಿದುಕೊಂಡು ಬಂದಿದೆ.
ನನ್ನ ನೂರಾರು ಪ್ರಕಟಿತ ಲೇಖನಗಳ ಹಿಂದಿರುವ ನಿಜವಾದ ಸಾಧನೆ ನನ್ನ ಛಾಯಾಗ್ರಾಹಕ ಮಿತ್ರರದು. ನನ್ನೊಳಗಿನ ಕನಸಿನ ಚಿತ್ರಗಳನ್ನು ಅವರು ತಮ್ಮ ಕ್ಯಾಮೆರಾಗಳ ಮೂಲಕ ನನಸಾಗಿಸಿದ್ದಾರೆ. ಎಷ್ಟೋ ಸಲ ಅವರ ಕನಸಿನ ಚಿತ್ರಗಳಿಗೆ ನಾನು ಅಕ್ಷರ ಪೋಣಿಸಿದ್ದೇನೆ. ಇದೊಂದು ಹೂವು-ದಾರದ ಸಂಬಂಧ.
ಕೊಪ್ಪಳದ ಪ್ರಕಾಶ ಕಂದಕೂರ ಹಾಗೂ ಧಾರವಾಡದ ಪ್ರಜಾವಾಣಿ ಛಾಯಾಗ್ರಾಹಕ ಬಿ.ಎಂ. ಕೇದಾರನಾಥಸ್ವಾಮಿ ನಾನು ಕಂಡ ಹಾಗೂ ಜೊತೆಯಾಗಿ ಕೆಲಸ ಮಾಡಿದ ಅತ್ಯುತ್ತಮ ಪತ್ರಿಕಾ ಛಾಯಾಗ್ರಾಹಕರು. ನಾವೆಲ್ಲ ಜೊತೆಜೊತೆಯಾಗಿ ನಮ್ಮ ವೃತ್ತಿಗಳಲ್ಲಿ ಪಳಗುತ್ತ ಹೋಗಿದ್ದೇವೆ. ಅವರ ಕ್ಯಾಮೆರಾಗಳಿಗೆ ನಾನು ಒಳನೋಟ ನೀಡಿದ್ದೇನೆ. ಅವರ ಒಳನೋಟದ ಚಿತ್ರಗಳಿಗೆ ನಾನು ಅಕ್ಷರವಾಗಿದ್ದೇನೆ. ಜೊತೆಯಾಗಿ ನಾವು ನೂರಾರು ಲೇಖನಗಳಿಗೆ, ನುಡಿಚಿತ್ರಗಳಿಗೆ ಕಾರಣರಾಗಿದ್ದೇವೆ.
ಮುಂದೆ ಟಿವಿ ಮಾಧ್ಯಮ ಸೇರಿದೆ. ಅಲ್ಲಿ ವಿಡಿಯೋಗ್ರಾಫರ್ಗಳು ನನ್ನ ಮಿತ್ರರಾದರು. ನನ್ನ ಹಲವಾರು ಕನಸಿನ ದೃಶ್ಯಾವಳಿಗಳನ್ನು ಅವರು ಅದ್ಭುತವಾಗಿ ಚಿತ್ರಿಸಿ ಕೊಟ್ಟಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಇದು ನಿಜಕ್ಕೂ ಅವಿನಾಭಾವ ಸಂಬಂಧ.
ಸಾವಿರಾರು ಶಬ್ದಗಳನ್ನು ಅದ್ಭುತವಾಗಿ ಪೋಣಿಸಿದ ನಂತರವೂ ಹೇಳಲು ಸೋಲುವ ಭಾವನೆಗಳನ್ನು ಉತ್ತಮ ಚಿತ್ರವೊಂದು ಅನಾಯಾಸವಾಗಿ ಕಟ್ಟಿಕೊಡುತ್ತದೆ. ಈ ಕಾರಣಕ್ಕಾಗಿ ನನ್ನೆಲ್ಲ ಛಾಯಾಗ್ರಾಹಕ ಮಿತ್ರರಿಗೆ ನಾನು ಅಭಾರಿಯಾಗಿದ್ದೇನೆ. ತೀರಿಸಲು ಸಾಧ್ಯವಾಗದ ಅವರ ಋಣ ನನ್ನ ಮೇಲಿದೆ. ವೃತ್ತಿ ಪತ್ರಿಕೋದ್ಯಮದಿಂದ ಸದ್ಯ ಬಿಡುವು ಪಡೆದಿರುವ ನಾನು ಅತಿ ಹೆಚ್ಚು ಮಿಸ್ ಮಾಡಿಕೊಳ್ಳುತ್ತಿರುವುದು ನನ್ನ ವೃತ್ತಿ ಛಾಯಾಗ್ರಾಹಕ ಮಿತ್ರರನ್ನು.
ಗೀಳು ತೀವ್ರವಾಗಿ ಕಾಡಿದಾಗ, ಉತ್ತಮ ಪಿಕ್ಸೆಲ್ ಸಾಮರ್ಥ್ಯದ ಗೆಳೆಯರ ಮೊಬೈಲ್ ಕೈಗೆತ್ತಿಕೊಂಡು ಚಿತ್ರ ತೆಗೆಯಲು ಪ್ರಯತ್ನಿಸುತ್ತೇನೆ. ಆಗಲೂ ಸಮಾಧಾನವಾಗದಿದ್ದಾಗ, ನಾನು ಕಂಡ ಅತ್ಯುತ್ತಮ ಛಾಯಾಗ್ರಾಹಕ ಮಿತ್ರರಾದ ಶಿವಶಂಕರ ಬಣಗಾರ, ಅಮೀನ್ ಅತ್ತಾರ್, ಸಲೀಂ ಬಳಬಟ್ಟಿ ಮುಂತಾದವರ ಚಿತ್ರಗಳನ್ನು ಎರವಲು ಪಡೆದು ನನ್ನ ಭಾವನೆಗಳನ್ನು ಅಕ್ಷರರೂಪಕ್ಕೆ ಇಳಿಸುತ್ತೇನೆ. ನನ್ನ ಹಲವಾರು ಬರವಣಿಗೆಗಳಿಗೆ ಜೀವ ತುಂಬಿದ್ದೇ ಇಂಥವರ ಅತ್ಯದ್ಭುತ ಚಿತ್ರಗಳು ಎಂಬುದು ಹೆಮ್ಮೆಯ ಸಂಗತಿ.
ಇವತ್ತು ವಿಶ್ವ ಛಾಯಾಗ್ರಹಣ ದಿನ. ಎಲ್ಲಾ ಆಚರಣೆಗಳೂ ನೆನಪಿಗೆ ಒಂದು ನೆವ ಮಾತ್ರ. ಆ ನೆಪದಲ್ಲಿ ಶಿವಶಂಕರ ಬಣಗಾರ, ಅಮೀನ್ ಅತ್ತಾರ್, ಸಲೀಂ ಬಳಬಟ್ಟಿ, ಪ್ರಕಾಶ ಕಂದಕೂರ, ಸುಜಿತ್ ಶೆಟ್ಟರ್, ಭರತ್ ಕಂದಕೂರ, ನಾಗರಾಜ ಹಡಗಲಿ, ಸಂಗಮೇಶ ಬಡಿಗೇರ, ಈರಣ್ಣ ಬಡಿಗೇರ್, ಮಾರುತಿ ಕಟ್ಟಿಮನಿ, ಬಿ.ಎಂ. ಕೇದಾರನಾಥಸ್ವಾಮಿ, ಅಮರದೀಪ ಪಿ.ಎಸ್., ಸತೀಶ ಬಿ.ಎಂ. ಅಲ್ಲದೇ ಫೇಸ್ ಬುಕ್ ಮೂಲಕ ಪರಿಚಯವಾದ, ಆದರೆ, ಇಲ್ಲಿ ಹೆಸರಿಸಿರದ ಹಲವಾರು ಛಾಯಾಗ್ರಾಹಕ ಮಿತ್ರರೂ ಸೇರಿದಂತೆ ಎಲ್ಲರಿಗೂ ವಿಶ್ವ ಛಾಯಾಗ್ರಹಣ ದಿನದ ಶುಭಾಶಯಗಳು.
ನಿಮ್ಮ ಕ್ಯಾಮೆರಾಗಳ ಮೂಲಕ ಜಗದ ಸೊಗಸು ಹೀಗೇ ಸೆರೆಯಾಗುತ್ತಿರಲಿ. ಕಾಲನನ್ನೇ ಸೆರೆ ಹಿಡಿಯುವ ನಿಮ್ಮ ಕೌಶಲ್ಯದ ಕೊಂಚ ಭಾಗವಾದರೂ ನನ್ನ ಅಕ್ಷರಗಳಿಗೆ ದಕ್ಕಲಿ, ಜಗದ ಮೂರನೇ ಕಣ್ಣಿನ ಸೊಗಸು ಮತ್ತೆ ಮತ್ತೆ ಉಕ್ಕಲಿ ಎಂದು ಆಶಿಸುತ್ತೇನೆ.
ಕಾಲನನ್ನೇ ಸೆರೆ ಹಿಡಿಯುವ ನಿಮಗೆ ಸಾವಿರ ಸಾವಿರ ನಮನಗಳು.
-ಚಾಮರಾಜ ಸವಡಿ, ಕೊಪ್ಪಳ
(ಚಿತ್ರ: ಎಡದಿಂದ ಬಲಕ್ಕೆ)
1 ನೇ ಸಾಲು: ಶಿವಶಂಕರ ಬಣಗಾರ, ಬಿ.ಎಂ. ಕೇದಾರನಾಥಸ್ವಾಮಿ, ಅಮೀನ್ ಅತ್ತಾರ್, ಪ್ರಕಾಶ ಕಂದಕೂರ;
2 ನೇ ಸಾಲು: ನಾಗರಾಜ ಹಡಗಲಿ, ಮಾರುತಿ ಕಟ್ಟಿಮನಿ, ಈರಣ್ಣ ಬಡಿಗೇರ, ಸಂಗಮೇಶ ಬಡಿಗೇರ, ಅಮರದೀಪ ಪಿ.ಎಸ್.;
3 ನೇ ಸಾಲು: ಸುಜಿತ್ ಶೆಟ್ಟರ್, ಭರತ್ ಕಂದಕೂರ, ಸತೀಶ ಬಿ.ಎಂ., ಸಲೀಂ ಬಳಬಟ್ಟಿ.
*****
ಧನ್ಯವಾದಗಳು ಸರ್