ಸಂಗಾತಿಯ ಗುರುತು
ಕಾರ್ತೀಕದ ಹಸಿರು ಪಸಲಿನ ಅಕ್ಕಡಿ ಸಾಲಿನಲ್ಲಿ
ಅರಳಿ ನಗುವ ಹಚ್ಚೆಳ್ಳು ಹೂವೇ !
ಸೀಳುಕ್ಕೆಯ ದೋಣಿ ಗೆರೆಯಲ್ಲಿ ಅನಂತ ನೆರಿಗೆ ಸೀರೆಯನುಟ್ಟು ಬೆಳ್ಳಗೆ ನಕ್ಷತ್ರದಂತೆ ನಗುವ ಹೆದ್ದಣಬೆಯೇ !
ಉರಿಬಿಸಿಲ ನೆತ್ತಿ ಬಂಪಿಗೆ
ಅರಳೆಲೆ ಆಸರೆ ಮೇಲುಮುಸುಗಿನ ತಣ್ಣನೆಯ ನೆರಳೇ !
ಕೆರೆಯಂಗಳದಲ್ಲಿ ಮೂಡಿದ
ಕುರಿ ಆಡು ತುರುಮಂದೆ ಗೊರಸು ಗುರುತುಗಳ
ನಡುವೆ ಮೂಡಿದ ತೊಗಲಗಿತ್ತಿಯ ಪಾದಗಣ್ಣಿನ ಗುರುತೇ !
ಕನಸುಗಣ್ಣಿಗೆ ಮುಂಗಾರಿನ ಬಯಲು ಹೂಮಳೆಯಲ್ಲಿ ಮೂಡಣ ಮುಗಿಲ ಬಾಗಿಲಿನಲ್ಲಿ ನಗುವ ಕಾಮನ ಬಿಲ್ಲೆ !
ಏನೆಂದು ಕರೆಯಲಿ
ನನ್ನ ನರವನ್ನೇ ಗಿಟಾರು ತಂತಿಮಾಡಿ ಕಗ್ಗಲ್ಲು ಕಣಿವೆಯ ಮೌನವನ್ನು ನನ್ನೆದೆಯಲ್ಲಿ ಮಧುರವಾಗಿ ನುಡಿಸುವ ಸಂಗಾತಿಯನ್ನ?!
-ಡಾ.ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು
*****