ಶ್ರೀ ಅಂಬಾಭವಾನಿ ದೇವಸ್ಥಾನದ 13ನೇ ವಾರ್ಷಿಕೋತ್ಸವ: “ಗಮನ ಸೆಳೆದ ಕುಂಭ ಮೇಳ, ಪಲ್ಲಕ್ಕಿ ಉತ್ಸವ” ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ -ಶಾಸಕ‌ ಸೋಮಶೇಖರ ರೆಡ್ಡಿ

ಬಳ್ಳಾರಿ, ಆ.22: ನಗರದ ಹವಂಬಾವಿ ಶ್ರೀ ಅಂಬಾಭವಾನಿ
ದೇವಸ್ಥಾನದ 13ನೇ ವಾರ್ಷಿಕೋತ್ಸವ ಭಾನುವಾರ ಶ್ರದ್ಧಾ ಭಕ್ತಿ, ವಿಜೃಂಭಣೆಯಿಂದ ನೆರವೇರಿತು.
ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ (ಎಸ್.ಎಸ್.ಕೆ)ಆರಾಧ್ಯ ದೇವತೆ ಶ್ರೀ ಅಂಬಾಭವಾನಿ ದೇವಸ್ಥಾನ ನಿರ್ಮಾಣವಾಗಿ 13 ವರ್ಷಗಳಾದ ಹಿನ್ನಲೆಯಲ್ಲಿ ಎಸ್.ಎಸ್.ಕೆ ಟ್ರಸ್ಟ್‌ ಕಮಿಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಸೇರಿದಂತೆ ನಾಡಿನ ವಿವಿಧ ಸ್ಥಳಗಳಿಂದ ಸಮಾಜ ಹಲವು ಗಣ್ಯರು ಆಗಮಿಸಿ ಕಾರ್ಯಕ್ರಮಕ್ಕೆ ಕಳೆ ತಂದಿದ್ದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಮಾತನಾಡಿ ದೇವಸ್ಥಾನದ ಅಭಿವೃದ್ಧಿ, ಭವನ ನಿರ್ಮಾಣಕ್ಕಾಗಿ ಶಾಸಕರ‌ನಿಧಿ ಹಾಗೂ ತಮ್ಮ ಸ್ವಂತ ಹಣ ಸೇರಿ 10 ಲಕ್ಷ ರೂ. ನೀಡಿದ್ದು ಸರಕಾರದಿಂದ ಮತ್ತಷ್ಟು ನೆರವು ಕೊಡಿಸಲು‌ ಬದ್ಧನಾಗಿದ್ದೇನೆ ಎಂದರು.

ಸಮೀಪದ ಉದ್ಯಾನವನದ ನಿರ್ವಹಣೆಯನ್ನು ದೇವಸ್ಥಾನದ ಟ್ರಸ್ಟ್ ಕಮಿಟಿಗೆ ನೀಡಬೇಕೆಂಬ ಬೇಡಿಕೆ ಇದ್ದು ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಹೇಳಿದರು.


ಕಾರ್ಯಕ್ರಮ ಉದ್ಘಾಟಿಸಿದ ಎ ಬಿ ಎಸ್ ಎಸ್ ಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಂಗಳೂರಿನ ರಾಮಚಂದ್ರಸಾ ಕಬಾಡಿ ಮಾತನಾಡಿ, ಕ್ಷತ್ರೀಯ ಸಮಾಜ ಒಳಪಂಗಡಗಳನ್ನು ಮರೆತು ಒಗ್ಗಟ್ಟಾಗುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಕೆ ಪಿ ಎಸ್ ಎಸ್ ಕೆ ಯುವ ಘಟಕದ ರಾಜ್ಯಾಧ್ಯಕ್ಷ ಕೃಷ್ಣಾಸಾ ದಲಬಂಜನ್ ಮಾತನಾಡಿ, ಸರಕಾರಿ ಸೌಲಭ್ಯಗಳನ್ನು ಪಡೆಯಲು ಸಮಾಜ ಒಗ್ಗೂಡುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎಸ್ ಕೆ ಸಮಾಜದ ಅಧ್ಯಕ್ಷ ವಿಠಲಸಾ ಮೋತಿಲಾಲಸಾ ಇರಕಲ್ ಅವರು, ಗಣ್ಯ ಅತಿಥಿ ಅಶೋಕ್ ಕಾಟ್ವೆ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಬಕೊ ಹಾಲು ಮಂಡಳಿಯ ನಿರ್ದೇಶಕ ವೀರಶೇಖರ ರೆಡ್ಡಿ, ಧಮದರ್ಶಿ ಹುಬ್ಬಳ್ಳಿಯ ಸತೀಶ ಮೆಹರವಾಡೆ, ಎ ಬಿ ಎಸ್ ಎಸ್ ಕೆ ರಾಜ್ಯ ಖಜಾಂಚಿ ಟಿ ಎಂ‌ಮೆಹರವಾಡೆ, ಕಾರ್ಯದರ್ಶಿ ಡಾ.ಶಶಿಕುಮಾರ ಮೆಹರವಾಡೆ, ರಾಜು ಕ್ಷತ್ರೀಯ ಸಮಾಜದ ಮುಖಂಡ ರವೀಂದ್ರ, ಕ್ಷತ್ರೀಯ ಸೇವಾ ಸಮಿತಿಯ ಕಾರ್ಯದರ್ಶಿ ಎಂ. ಶಿವಾಜಿ ರಾವ್, ಎಸ್ ಎಸ್ ಕೆ ಮಿತ್ರ ಮಂಡಳಿಯ ಪದಾಧಿಕಾರಿಗಳು, ಶ್ರೀ ಅಂಬಾಭವಾನಿ ಮಹಿಳಾ ಮಂಡಳಿ ಸಲಹಾ ಸಮಿತಿ ಸದಸ್ಯರು, ಕಾರ್ಯಕಾರಿ ಮಂಡಳಿ ಅಧ್ಯಕ್ಷೆ ರೇಣುಕಾಬಾಯಿ ಎಸ್. ಸಿದ್ಲಿಂಗ್, ಸದಸ್ಯರು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಮಿಟಿ ಕಾರ್ಯದರ್ಶಿ ಶ್ರೀನಿವಾಸ ಎಲ್ ಚಾವಡಿಮನಿ ಅವರು ಸಂಪಾದಿಸಿದ ಸಹಸ್ರಾರ್ಜುನ ಮಹಾರಾಜರ ಜಯಕಾರದ ಆಡಿಯೋವನ್ನು ಗಣ್ಯರು‌ಬಿಡುಗಡೆ ಮಾಡಿದರು.


ಸನ್ಮಾನ: ಅರವತ್ತು ವರ್ಷ ತುಂಬಿದ ಸಮಾಜದ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕುಂಭ ಮೇಳ, ಪಲ್ಲಕ್ಕಿ ಉತ್ಸವ ಧಾರ್ಮಿಕ ಕಾರ್ಯಕ್ರಮಕ್ಕೆ ಕಳೆ ತಂದಿದ್ದವು.


ಕಮಿಟಿ ಸದಸ್ಯ ಗಣಪತಿಸಾ ಎಲ್.ಬದಿ ಸ್ವಾಗತಿಸಿದರು. ಕೆ ಪಿ ಎಸ್ ಎಸ್ ಕೆ ರಾಜ್ಯ ಜಂಟಿ ಕಾರ್ಯದರ್ಶಿ ಕೃಷ್ಣಮೂರ್ತಿ ಟಿ.ರಂಗ್ರೇಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಳುಸಾ ಟಿ. ರಂಗ್ರೇಜ್ ವಂದಿಸಿದರು.


*****