ಅನುದಿನ ಕವನ-೬೦೦, ಕವಯತ್ರಿ: ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ್, ಬೆಳಗಾವಿ ಕವನದ ಶೀರ್ಷಿಕೆ: ಅಲ್ಲಮನಾಗುವುದಾದರೆ….

ಅಲ್ಲಮನಾಗುವುದಾದರೆ………

ಅಂತರಂಗದ ಕತ್ತಲೆಗೆ ಬೆಳಕ ಶಬ್ದ ಬಿತ್ತುವ ದೇವಗುರು. ಘನ ಪ್ರೇಮದ ಮಾಯೆಗೆ ಮರಿಚಿಕೆ ನಿತ್ಯ ಪ್ರೀತಿ.
ಮಧುರ ಪ್ರೇಮದ ಗರ್ಭದಲ್ಲಿ ಕಟು ವಿರಹದ ತಾಪ. ಪ್ರಕಾಶದ ಮಹಾ ಶರೀರ ಕಣ್ಣ ಬೆಳಕಿನ ಜ್ಯೋತಿರ್ಲಿಂಗ .

ಅನಂತದಲ್ಲಿನ ಆತ್ಮ, ಬಯಲ ಬೆಸುಗೆಗೆ ಜೋಗುಳ ಲಾಲಿ. ನಕ್ಷತ್ರ ಮಿಂಚು ತಂಗಾಳಿಗಳ ಹಸುಗು ಸಂತೆ. ಚಂದ್ರಮುಖಿಯ ರೋಧನ, ಬೆಳದಿಂಗಳ ಕಳೆಗುಂದಿದ ಕಾಂತಿ.
ಕರಗುವ ಹಿಮ, ದರ್ಶನದ ಮೇರು, ಮದ್ದಳೆಯ ನಾದವೇ ಗಟ್ಟಿಮೇಳ…

ತುಟಿಯ ಮೌನಕ್ಕೆ ಬಾಗಿದ ತಲೆ, ನನ್ನ ಹೃದಯಕ್ಕಿಗ ಸಾವಿರದ ಮಾತು.
ಕಣ್ಣ ಕಾಡಿಗೆಯ ಕಾರ್ಮೋಡ, ಸಿವುಡುಗಟ್ಟಿದ ಸಿಟ್ಟು .ಕಪ್ಪು ಕಳೆದುಕೊಂಡ ಮುಗಿಲು, ತಪಗುಟ್ಟಿ ಜಿನುಗುವ ಕಣ್ಣಾಲಿ. ಮಾಯೆಯ ವಿರಹಕ್ಕೀಗ ಮತ್ತೆ ಮರೆಯದ ಹರೆಯ..

ಬೆನ್ನಟ್ಟಿದ ಅದೇ ಕಂಗಳು, ತುಟಿಯಂಚಿನ ಕೋಲ್ಮಿಂಚು.ಮುಂಗುರುಳ ದುಂಬಿ’ ಮಾದಕ ನಗೆ’ ನೀ ಅರಸಿಬಂದ ಅನುರಾಗ.ಮಾತುಮೌನ ನಿಟ್ಟುಸಿರ ಕಥೆಯಾಗಿಸುವುದಾದರೆ, ಭೋರ್ಗರೆದು ಸುರಿದು ಬಿಡುವೆ ಯಾವ ಒಡಂಬಡಿಕೆಗಳಿಲ್ಲ…

ಸ್ವರ ಲಾವಣಿ ನೂರು ಪದ ಸರಣಿ, ಪೊಣಿಸಿದ ಮುತ್ತುಗಳೆಲ್ಲಾ ಎದೆಯ ಬಾರಕ್ಕೆ ಕಳೆಗುಂದದಿರಲಿ..ಒಲವ ಸರಕು ಬಿಕರಿಯಾಗಲು ಬದುಕು ವ್ಯಾಪಾರವಲ್ಲ.ನಿನ್ನ ಜಂಗಮನಾದಕ್ಕೆ ತಾಳ ತಪ್ಪಿದ ಕಾಲ್ಗೆಜ್ಜೆ ,ಮದ್ದಲೆಯ ಸುನಾದಕ್ಕೆ ಮಾತ್ರ ಸಾವಿಲ್ಲ…

ಕೈ ಬೆರಳುಗಳ ಬೆರಗು, ಮೋಹನ ಮುರಳಿ ಎದೆಯ ಮೀಟಿದ ತಂತಿ.ಭಾವ ಬಸಿರು ಬಗೆದು ಬಂದ ಒಲವಗಾನ ಘನಪ್ರೇಮದ ಸಂತಿ.
ನೀನೇ ಬರೆಯಬೇಕಿಗ, ಹೃದಯ ಶಾಹಿಯಿಂದ ಕಥೆಯೋ ಕವನವೋ.ದಿಕ್ಕು ತಪ್ಪಿದ ವರ್ಣಮಾಲೆ ಖಾಲಿಯಾದ ಪದ ಭಂಡಾರ …

ಅಂಗಾಂಗಗಳ ವರ್ಣರಂಜಿತ ಹೊಗಳಿಕೆ ಬೇಕಿಲ್ಲ.ಯಾವ ಪ್ರಮೇಯಗಳಿಗೂ ಹೋಲಿಸಬೇಡ.
ಅರಸಿಬಂದ ಅರಸನ ಕನಸ ಕಂಗಳ ಚಲುವೆ . ನೀ ಕಟ್ಟುವ ಪದಬಂಧದ ಶಬ್ದ ಮಾಲೆಗೆ ಕೇವಲ ಪ್ರತಿಮೆ ಮಾತ್ರ..

ಸೋಬಾನೆಗೆ ಸೋನೆ ಮಳೆಯ ಉಯ್ಯಾಲೆ .ಅಮಾವಾಸ್ಯೆಯ ಚಂದ್ರನೀಗ ಹುಣ್ಣುಮೆಯ ಮದುವಣಿಗ. ನಾ ಬೆಳದಿಂಗಳ ಬಾಲೆ, ನಿತ್ಯವೂ ಮಲ್ಲಿಗೆ ದಂಡೆಯ ಮುಡಿಗೇರಿಸಿ ಕೊಂಡ ಮದುವಣಗಿತ್ತಿ. ಸುರಿವ ಮಳೆ ಕೊರೆವ ಚಳಿ ತುಟಿಯ ನಗು ನಿನ್ನ ಅಲ್ಲಮನಾಗಲೂ ಬಿಡೆನೂ ನಾ…

✍️ -ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ್, ರಾಣಿ ಚನ್ನಮ್ಮ ವಿವಿ, ಬೆಳಗಾವಿ