ಅನುದಿನ ಕವನ-೬೦೧, ಹಿರಿಯ ಕವಿ: ಲಿಂಗಾರೆಡ್ಡಿ ಶೇರಿ, ಸೇಡಂ, ಕವನದ ಶೀರ್ಷಿಕೆ: ಇವನು ಅವನಲ್ಲ…..

ಇವನು ಅವನಲ್ಲ

ಅಂದು ಕಳೆದು ಹೋದವನು
ಇಂದು ಸಿಕ್ಕಿದ್ದಾನೆ.
ಆದರೆ ಇವನು ಅವನಲ್ಲ!

ಅಂದು ಕಳೆದು ಹೋದವನ
ಮುಖದಲ್ಲಿತ್ತು ಇಂದು ಕಳೆ.
ಬೆಳ್ಳಗೆ ನಗುತ್ತಿದ್ದ,
ಇಂಪಾಗಿ ಹಾಡುತ್ತಿದ್ದ,
ಜಿಂಕೆಯಂತೆ ಓಡಾಡುತ್ತಿದ್ದ,
ಹಕ್ಕಿಯಂತೆ ಹಾರಾಡುತ್ತಿದ್ದ.
ಇವನು ಅವನಲ್ಲ.

ಅವನಲ್ಲಿ ಕನಸುಗಳಿದ್ದವು
ಹುಡುಕುತ್ತಿದ್ದ ಭರವಸೆಯಿಂದ.
ಅವನಲ್ಲಿ ನಂಬಿಕೆಗಳಿದ್ದವು
ಎದೆದುಂಬಿಕೊಂಡಿದ್ದ ಪ್ರೀತಿಯಿಂದ.
ಇಂದು ಇವನು
ಅವೆಲ್ಲ ಇಲ್ಲದ ಬಡಪಶುವಿನಂತೆ
ನಿಂತಿದ್ದಾನೆ
ನೋಡುತ್ತಿದ್ದಾನೆ
ಒಮ್ಮೆ ಆಕಾಶ
ಒಮ್ಮೆ ಭೂಮಿ.
ಇಷ್ಟು ಜನ ನೋಡುತ್ತ ನಿಂತ ನಮ್ಮನ್ನು ಮರೆತು.

ಏನೋ ಮರೆತು ಹೋದದ್ದನ್ನು
ನೆನಪು ಮಾಡಿಕೊಂಡು
ಹುಡುಕುವಂತೆ ಕಣ್ಣು ಹೊರಳಾಡಿಸುತ್ತ ಸುತ್ತ.

ಒಮ್ಮೆ ಅತ್ತ ದೇವಸ್ಥಾನದ ಪ್ರಾಂಗಣದತ್ತ
ಒಮ್ಮೆ ಇತ್ತ ಶಾಲಾ ಮೈದಾನದತ್ತ
ಒಮ್ಮೆ ಆ ಗುರುವಿನತ್ತ
ಒಮ್ಮೆ ಈ ಗುರುವಿನತ್ತ
ತಂದೆ ತಾಯಿಗಳತ್ತ
ಹೊಲದತ್ತ ಮನೆಯತ್ತ
ಮತ್ತೆ ಆಕಾಶದತ್ತ.

ಅವನಿಗೆ ಮಾತಾಡಲು
ಹೊಳೆಯುತ್ತಿಲ್ಲ.
ಸುತ್ತ ನೆರೆದಿದ್ದ ಜನರ ಮಾತುಗಳಲ್ಲಿ
ಸಂಬಂಧಗಳೇ ಇರಲಿಲ್ಲ.
ತಮತಮಗೆ ತಿಳಿದಂತೆ ಮಾತಾಡುವವರೆ ಎಲ್ಲ.
ಅಲ್ಲಿ ಯಾರಿಗೂ ಮುಖಗಳಿರಲಿಲ್ಲ
ಕೈಗಳಿರಲಿಲ್ಲ, ಹೃದಯವೂ ಇರಲಿಲ್ಲ.

ಅವನೊಮ್ಮೆ ಗಟ್ಟಿಯಾಗಿ
ಚೀರಿದ
” ನೀವೆಲ್ಲ ಸ್ವಾರ್ಥಿಗಳು.
ನಿಮಗೆ ಬೇಕಾದ ಹಾಗೆ
ಕಡೆಯುವುದನ್ನು ಬಿಡಿ.
ನನ್ನನ್ನು ಹಳ್ಳವಾಗಿ ಹರಿಯಲು ಬಿಡಿ.”

ಅವನು ಮತ್ತೆ ಅಲ್ಲಿಂದ ಓಡಿ ಹೋದ.
ನೆರೆದಿದ್ದ ಜನ ಎಂದರು
‘ ಇವನು ಅವನಲ್ಲ! ‘
ಹಾಗಾದರೆ
ಅವನು ಎಲ್ಲಿ ಹೋದ?

-ಲಿಂಗಾರೆಡ್ಡಿ ಶೇರಿ, ಸೇಡಂ
*****