ಜಾತ್ಯಾತೀತ, ನವ ಸಮಾಜ ನಿರ್ಮಾಣವೇ ಬಸವಾದಿ ಶರಣರ ಗುರಿಯಾಗಿತ್ತು – ಡಾ. ಸಂಗಮೇಶ ಗಣಿ

ಹೊಸಪೇಟೆ, ಆ.30: : ಜಾತ್ಯಾತೀತ, ಸಮತಾ, ನವ ಸಮಾಜ ನಿರ್ಮಾಣವೇ ಬಸವಾದಿ ಶರಣರ ಗುರಿಯಾಗಿತ್ತು ಎಂದು ಕನ್ನಡ ಉಪನ್ಯಾಸಕ ಡಾ.ಸಂಗಮೇಶ ಎಸ್. ಗಣಿ ಅವರು ಹೇಳಿದರು.
ನಗರದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಸೋಮವಾರ ಸ್ಥಳೀಯ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಎರ್ಪಡಿಸಿದ್ದ ಪರಿಷತ್ತು ಸಂಸ್ಥಾಪಕರ ದಿನಾಚರಣೆ, ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತಾನಾಡಿದರು.
ಮನುಜ ಮೂಲತಃ ಬಂಡಾಯ ಗುಣದವನು, ಆಯಾ ಕಾಲಮಾನದಲ್ಲಿ ಇರುವಂತಹ ವ್ಯವಸ್ಥೆಗೆ ವಿರುದ್ಧವಾಗಿ ಪರ್ಯಾಯ ವ್ಯವಸ್ದೆಯ ಆಶಿಸುವ ಧೋರಣೆಯೇ ಬಂಡಾಯ ಎಂದು‌ ತಿಳಿಸಿದರು.
ಬಸವಾದಿ ಶರಣರು ಜಾತಿ ವ್ಯವಸ್ಥೆಯ ಸಾಮಾಜಿಕ ಪರಿಸರವನ್ನ ಪ್ರಬಲವಾಗಿ ವಿರೋಧಿಸಿದರು, ಬಂಡಾಯ ಮನೋದೋರಣೆಯನ್ನ ತೀವ್ರವಾಗಿ ತಮ್ಮ ಸಹಸ್ರಾರು ವಚನಗಳಲ್ಲಿ ಧ್ವನಿಯಾಗಿ ಮಾರ್ಧನಿಸಿದರು ಎಂದರು. ಸಾಮಾನ್ಯವಾಗಿ ಬರಹಗಾರರ ಬರಹಕ್ಕೆ ಆಯಾ ಕಾಲಮಾನದ ಸ್ಥಿತಿಗತಿಯ ಓಲೈಸುವಿಕೆಯು ಕಾಣ ಬರುತ್ತದೆ. ಆದರೆ ಬಸವಾದಿ ಪ್ರಮಥರು ಆ ಕಾಲದ ಸಾಮಾಜಿಕ ಅಸಮಾನತೆಯನ್ನ ವಿರೋಧಿಸುತ್ತ ,ಪ್ರಜಾಪ್ರಭುತ್ವ ನೆಲೆಗಗಟ್ಟಿನಲ್ಲಿ ಜಾತಿ ವರ್ಣ ವರ್ಗಾತೀತ ಸುಂದರ ಶರಣ ಸಮಾಜದ ಕಲ್ಯಾಣ ರಾಜ್ಯವನ್ನು ಕಲ್ಪಿಸಿಕೊಡುವುದೇ ಅವರ ವಚನ ಸಾಹಿತ್ಯದ ಬಂಡಾಯ ಧೋರಣೆಯಾಗಿತ್ತೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿ.ವಿ‌.ಶಾಸನ ಶಾಸ್ತ್ರ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ ಅವರು, ಮೈಸೂರು ಸುತ್ತೂರು ಮಠದ ಜಗದ್ಗುರು ಮ.ನಿ.ಪ್ರ ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮೀಜಿ ಅವರು ಸಮ ಸಮಾಜದ ಬಗ್ಗೆ ಬಂಡಾಯ ಧ್ವನಿಯಾದಂತಹ ವಚನ ಸಾಹಿತ್ಯವು ಇಂದು ಮುಂದು ಎಂದೆಂದಿಗೂ ಜಗತ್ತಿನ ಜನತೆಗೆ ಅನುಕರಣೀಯವಾದುದೆಂದೇ, ವಚನ ಸಾಹಿತ್ಯದ ಪ್ರಸಾರ ಪ್ರಚಾರಕ್ಕಾಗಿಯೇ ಪರಿಷತ್ತನ್ನ ಸಂಸ್ಥಾಪಿಸಿದ್ದಾರೆ ಎಂದರು.
ಸ್ಥಳೀಯ ಪರಿಷತ್ತಿನ ನೂತನ ಅಧ್ಯಕ್ಷೆ ನಿವೃತ್ತ ಉಪನ್ಯಾಸಕಿ ಸೌಭಾಗ್ಯಲಕ್ಷ್ಮಿ, ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಗೌರವಣ್ಣನವರ ಬಸಪ್ಪ ಮಾತನಾಡಿದರು.
ವೇದಿಕೆಯಲ್ಲಿ ಸರ್ಕಾರಿ ನೌಕರರ ಸಂಘದ ಸಂಚಾಲಕ ವೀರಭದ್ರಪ್ಪ, ಕದಳಿ ವೇದಿಕೆಯ ಶಾರದಾ ಮಲಶೆಟ್ಟಿ ಉಪಸ್ಥಿತರಿದ್ದರು.
ವೇದಿಕೆಯ ಪ್ರಧಾನ ಸಂಚಾಲಕರಾದ ಡಾ. ಆರ್. ಅಕ್ಕಮಹಾದೇವಿ ಅವರು ಪರಿಷತ್ತಿನ ಹಾಗೂ ಕದಳಿ ವೇದಿಕೆಯ ಸಂಚಾಲಕರನ್ನ ಪರಿಚಯಿಸಿದರು.
ಆರಂಭದಲ್ಲಿ ವಿಶ್ವಗುರು ಬಸವಣ್ಣನವರ ಹಾಗೂ ಪರಿಷತ್ತಿನ ಸಂಸ್ಥಾಪಕರ ಭಾವಚಿತ್ರಕ್ಕೆ ಗಣ್ಯರು ಪುಷ್ಪಗಳನ್ನು ಅರ್ಪಿಸಿದರು.
ಕಲಾವಿದೆ ಶ್ರೀಮತಿ ಪುಷ್ಪಾ ಮಲ್ಲಿಕಾರ್ಜುನ ಅವರು ವಚನ ಗಾಯನ ಮಾಡಿದರು. ಸಾಹಿತಿ ಉಮಾಮಹೇಶ್ವರ ನಿರೂಪಿಸಿದರು.ಹಾಗೂ ಶಿಕ್ಷಕ ಎನ್‌. ನಾಗರಾಜ ವಂದಿಸಿದರು.
*****