ಹಂದ್ಯಾಳ್ ಮಹಾದೇವ ತಾತ ಕಲಾ ಸಂಘದ ಕಲಾಸೇವೆ ಶ್ಲಾಘನೀಯ -ಎನ್ ಜಿ ಓ ಅಧ್ಯಕ್ಷ ಎಂ.ಶಿವಾಜಿರಾವ್

ಬಳ್ಳಾರಿ,ಸೆ.1: ಕಳೆದ ಹಲವು ವರ್ಷಗಳಿಂದ ಕಲೆಯನ್ನು ಪೋಷಿಸಿ ಉಳಿಸಿ ಬೆಳೆಸುತ್ತಿರುವ ಶ್ರೀ ಮಹಾದೇವ ತಾತ ಕಲಾಸಂಘದ ಸೇವೆ ಶ್ಲಾಘನೀಯ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಶಿವಾಜಿರಾವ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ನಗರದ ತಾಳೂರು ರಸ್ತೆಯ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ಹಂದ್ಯಾಳ್ ಶ್ರೀ ಮಹಾದೇವತಾತ ಕಲಾ ಸಂಘ ಇವರು ಆಯೋಜಿಸಿದ್ದ ಸಾಂಸ್ಕೃತಿಕ ಸಂಭ್ರಮ- 2022 ಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ಎರಡು ವರ್ಷ ಕೊರೊನಾ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ತಟಸ್ಥಗೊಂಡಿದ್ದವು. ಕಲಾವಿದರು ಸಂಕಷ್ಟ ಸ್ಥಿತಿ ತಲುಪಿದ್ದರು. ಇದೀಗ ಶ್ರೀಮಹಾದೇವತಾತ ಕಲಾ ಸಂಘದಂತಹ ಸಂಘಟನೆಗಳು ಮತ್ತೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಕಲಾ ಪ್ರಕಾರವನ್ನು ಉಜ್ಜೀವನಗೊಳಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯುತ್ತಿರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಕುಮಾರಿ ಸಾಯಿ ಶೃತಿ ಮತ್ತು ತಂಡದವರು ಪ್ರಾರಂಭದಲ್ಲಿ ಭಕ್ತಿಗೀತೆಗಳು ಮತ್ತು ಭಾವಗೀತೆಗಳನ್ನು ಹಾಡಿದರು. ಜಡೇಶ್ ಎಮ್ಮಿಗನೂರು ಇವರಿಂದ ತತ್ವಪದಗಳು ಮತ್ತು ಜಾನಪದ ಗೀತೆಗಳ ಕಾರ್ಯಕ್ರಮ ನಡೆಯಿತು. ಶಿಕ್ಷಕ, ಹಾಸ್ಯ ಕಲಾವಿದ ಯರಿಸ್ವಾಮಿ ಅವರಿಂದ ಹಾಸ್ಯ ಕಾರ್ಯಕ್ರಮ ನೆರೆದಿದ್ದ ಜನರನ್ನು ನಗೆಗಡಲೆಲ್ಲಿ ತೇಲಾಡಿಸಿತು.


ದಿ.ಶಿವಶಂಕರ ನಾಯ್ಡು ರಚಿಸಿ ಪುರುಷೋತ್ತಮ ಹಂದ್ಯಾಳ್ ಅವರು ನಿರ್ದೇಶಿಸಿದ ಹಾಸ್ಯ ನಾಟಕ “ದ್ರೌಪತಿ ವಸ್ತ್ರಾಪಹರಣ” ಅರ್ಥಾತ್ ದನ ಕಾಯೋರ ದೊಡ್ಡಾಟ ಪ್ರೇಕ್ಷಕರನ್ನು ನೆಗೆಗಡಲೆಲ್ಲಿ ತೇಲಿಸಿತು. ಹಚ್ಚೊಳ್ಳಿ ಅಂಬರೀಷ್ ಮತ್ತು ತಂಡದವರಿಂದ ನಡೆದ ನಾಟಕ ಪ್ರದರ್ಶನದಲ್ಲಿ ಸಾರಥಿಯಾಗಿ ಪುರುಷೋತ್ತಮ ಹಂದ್ಯಾಳು, ಊರಿನ ಧಣಿಯಾಗಿ ಶಿಕ್ಷಕ ಮೆಹತಾಬ್, ಗಣೇಶನಾಗಿ ಕಪ್ಪಗಲ್ ಚಂದ್ರಶೇಖರ್ ಆಚಾರ್, ಕೃಷ್ಣನಾಗಿ ಶಿಕ್ಷಕ ಯರಿಸ್ವಾಮಿ, ದುರ್ಯೋಧನನಾಗಿ ಅಂಬರೀಶ್ ಹಚ್ಚೋಳ್ಳಿ, ದುಶ್ಯಾಸನನಾಗಿ ಪಾರ್ವತೀ ಶ್ ಗೆಣಿಕಿಹಾಳು, ಭೀಮ ಮತ್ತು ಕುಡುಕನ ಪಾತ್ರಧಾರಿಯಾಗಿ ಜಡೇಶ್ ಎಮ್ಮಿಗನೂರು, ದ್ರೌಪದಿ ಪಾತ್ರದಲ್ಲಿ ಮೌನೇಶ್ ಕಲ್ಲಳ್ಳಿ, ಕಥಾ ಸಂಚಾಲಕನ ಪಾತ್ರದಲ್ಲಿ ಸುಂಕಪ್ಪ ಎರಗುಡಿ, ಸಹದೇವನ ಪಾತ್ರದಲ್ಲಿ ನಾಗಭೂಷಣ ಕಪ್ಪಗಲ್, ನಕುಲನಾಗಿ ಹನುಮಂತ ಕಪ್ಪಗಲ್, ಅಗಸನ ಪಾತ್ರದಲ್ಲಿ ಕುಮಾರ್ ಗೌಡ ಅಮರಾಪುರ ಅವರು ಮನೋಜ್ಞವಾಗಿ ಅಭಿನಯಿಸಿದರು. ತಬಲ ಸಾಥ್ ವೀರೇಶ್ ಸಿಡಿಗಿನಮೊಳ, ಕ್ಯಾಸಿಯೋ ಪುಟ್ಟರಾಜ ಸಹಕಾರ ನೀಡಿದರು.


ನಾಟಕ ಪ್ರದರ್ಶನಕ್ಕೂ ಮುನ್ನ ಮಾತನಾಡಿದ ಶ್ರೀ ಮಹದೇವತಾತ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳ್ ಅವರು, ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್ ಮತ್ತು ಬಾಲ ವಿನಾಯಕ ಗೆಳೆಯರ ಬಳಗದ ಪದಾಧಿಕಾರಿಗಳ ಸಹಕಾರವನ್ನು ಸ್ಮರಿಸಿದರು.
ಸಿರುಗುಪ್ಪ ಉಪ ಖಜಾನೆಯ ಮುಖ್ಯ ಲೆಕ್ಕಿಗ ಪಿ.ಅಲ್ಲಾಬಕಾಷ್, ಶಿಕ್ಷಕ ಮೆಹತಾಬ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು.
*****