ಅನುದಿನ ಕವನ-೬೧೧, ಕವಯತ್ರಿ: ಡಾ. ಸಿ.‌ನಂದಿನಿ, ಬೆಂಗಳೂರು ಕವನದ ಶೀರ್ಷಿಕೆ: ದೈವತ್ವ ಅರಸಿ….

ದೈವತ್ವ ಅರಸಿ

ನೀ ಗುರುವೋ ತಂದೆಯೋ
ಆಶಾಕಿರಣವೋ ಆತ್ಮಬಂಧುವೋ
ದಾರಿ ದೀಪವಾದರೂ ಆಗುವೆಯೆಂದು
ಪಾದವನಪ್ಪಿದೆ
ಅರೆಬಿರಿದೂ ಬಿರಿಯದ
ಗುಲಾಬಿಯನೋಲುವ
ಎಳೆ ಬಾಲೆಯ ಹಿಡಿದೆತ್ತಿ ಆಶೀರ್ವದಿಸಿದೆಯಲ್ಲ
ಎಲ್ಲೆಲ್ಲೂ ಕಾಣುವ ದೇವನ ಆತ್ಮ
ಕಾಣಲಿಲ್ಲವಾ ಕಣ್ಣೀರು ಕರೆಗಟ್ಟಿದ
ನನ್ನ ಕೆನ್ನೆಗಳ ಮೇಲೆ

ಗುರುವೂ ತಂದೆಯೂ
ಬೆಳಕೂ ಬಂಧವೂ
ಮನೆಯೊಳಗೇ ಇರುವುದಾಗಿದ್ದರೆ
ನಿನ್ನ ಪಾದ ಕಮಲದಲ್ಲೇಕೆ ಅರಸುತ್ತಿದ್ದೆ
ಭವಿಷ್ಯದ ಬೆರಗ
ಮಗುವಿನಂಥಾ ದೇಹದ ಮೇಲೆ
ಮೋಹ ಹುಟ್ಟೀತೇ
ಯಾರಿಗೆ ಕೇಳೀತು ಅರಣ್ಯ ರೋದನ
ಒಸರಿದ ರಕ್ತವ ಕೆಂಪು ವಸ್ತ್ರ ನುಂಗಿತು
ಕಣ್ಣೀರು ಶಾಪವಾಗಿ
ಒಂದು ದಿನ ನಿನ್ನ ನುಂಗೀತು
ಮಾಯದ ಗಾಯದ ಕರೆಯು
ಬರೆಯ ಹಾಕಿದಂತೆ ಕಾಣದೆ
ಲೋಕ ಕೇಳದೆ ಇದೇನು ಅನ್ಯಾಯವೆಂದು

ಅರಳದ ಕುಂದದ ನಾಜೂಕಿನ ದೇಹವಿದು
ಕನಸುಗಳ ಮಾಲೆ ಮಾಡಿ
ಕುದುರೆಯೇರಿ ಬರಲಿರುವ ರಾಜಕುಮಾರನಿಗಾಗಿ
ಜೋಪಾನ ಮಾಡಿರುವೆ
ತನು ಮನವ ಛಿದ್ರ ಮಾಡದಿರು
ರಣಹದ್ದಿನಂತೆ ಕಿತ್ತು ಬಗೆದು ತಿನ್ನದಿರು
ಅದೇ ಪಾದಗಳ ಮೇಲೆ
ಕಣ್ಣೀರ ಕೋಡಿ ಮಾಡಿ ಬೇಡಿದೆನಲ್ಲ
ಅದಕೇ ನೋಡು ಸ್ತ್ರೀ ಕುಲ
ಅಸಹ್ಯಸುತ್ತಿದೆ ಅನುಮಾನಿಸುತ್ತಿದೆ
ನಿಜ ದೈವತ್ವವನ್ನೂ…

-ಡಾ.‌ಸಿ. ನಂದಿನಿ (ನಂದಿನಿ ವಿರು), ಬೆಂಗಳೂರು
*****