ಒಲಿಯಬೇಕು ಕವಿತೆ ಒಲಿದಂತೆ ಚೆಲುವಿನ ವನಿತೆ; ಒಲಿಯಬೇಕು ವನಿತೆ ಒಲಿದಂತೆ ನವನವೀನ ಕವಿತೆ, ಹಚ್ಚಿದಂತೆ ಕತ್ತಲಲ್ಲಿ ಸಂಭ್ರಮದ ಒಲವಿನ ಪ್ರೀತಿಯ ಹಣತೆ…
ತೊನೆಯಬೇಕು ಕವಿತೆ ತೊನೆದಂತೆ ಮೀನಕಣ್ಣಿನ ಹೆಣ್ಣು; ತೊನೆಯಬೇಕು ಹೆಣ್ಣು ತೊನೆದಂತೆ ಮರದಲ್ಲಿನ ತಾಜಾ ಹಣ್ಣು.. ಮುಂಗಾರಿನ ಮೊದಲ ಹನಿಗಳಿಗೆ ತೆರೆದುಕೊಂಡಂತೆ ಕಾದ ಮಣ್ಣು…
ಬಿರಿಯಬೇಕು ಕವಿತೆ ಒಲವ ತುಂಬಿದ ಮನದನ್ನೆಯ ತನು – ಮನವಿನಂತೆ; ಬಿರಿಯಬೇಕು ಕವಿತೆ ಮಲ್ಲಿಗೆ ಸಂಪಿಗೆಯ ಸುಗಂಧದ ಸವಿಯಂತೆ ; ನಮ್ಮ ಚಂದ್ರಮಳ ನಸು ನಗುವು ಮರುಕಳಿಸಿ ಎದುರು ನಿಂತು ಮೆಲ್ಲನೆ ಕರೆವಂತೆ…
ಅರಳಬೇಕು ಕವಿತೆ ಕಾಮನಬಿಲ್ಲಿನ ಬಣ್ಣಗಳಂತೆ
ಹರಡಬೇಕು ಕವಿತೆ ಆಗಸದ ನಕ್ಷತ್ರಗಳು ಬೆಳಕು ಹಂಚಿ ನಗುವ ಚೆಲ್ಲುವಂತೆ, ಕಡಲಿನೆಗಳು ಕುಲುಕುಲು ಕುಣಿದು ಖುಷಿಯನ್ನು ಎದೆಗೆ ಎಸೆಯುವಂತೆ…
ನರ್ತಿಸಬೇಕು ಕವಿತೆ ಜೋಗಜಲಪಾತದಂತೆ ; ಉಂಚಳ್ಳಿಯ ನೀರೆ ನೀರು ಚಿಮ್ಮುವಂತೆ; ಗಗನ ಚುಕ್ಕಿ ಭರಚುಕ್ಕಿ ನೊರೆ ನೊರೆಯ ನಲಿವ ಸುರಿದಂತೆ ಕಾವ್ಯ ಕನ್ನಿಕೆ ನಕ್ಕು ನೀರಾಗುವಂತೆ…
ಕೆರಳಬೇಕು ಕವಿತೆ ಫ್ರಾನ್ಸಿನ ಮಹಾಕ್ರಾಂತಿಯ ಆಶಯಗಳ ಅಕ್ಷರಗಳಂತೆ ; ಮುಡಿಯಬೇಕು ಕವಿತೆ ಗಾಂಧಿ, ಮಾರ್ಕ್ಸ್, ಬುದ್ದ, ಬಸವ, ಅಂಬೇಡ್ಕರ್ ನುಡಿಮುತ್ತುಗಳನ್ನು ಎಂದೂ ಬಾಡದಂತೆ ; ಇರಬೇಕು ಕವಿತೆ ಭೂಮಿಗೂ ಮುಗಿಲಿಗೂ ಹೂವ ಏಣಿಯಂತೆ…
-ಕೇಶವರೆಡ್ಡಿ ಹಂದ್ರಾಳ್, ಬೆಂಗಳೂರು
*****