ಅನುದಿನ ಕವನ-೬೧೫, ಕವಯತ್ರಿ: ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಮದುವೆ ಮನೆ

ಮದುವೆ‌ ಮನೆ

ಮದುವೆ ಸಂಭ್ರಮ ಮನದಿ ಹರುಷವು
ವಧುವು ವರರನು ಸಿದ್ದ ಮಾಡಲು
ಪದವ ಹಾಡುತ ಜನರು ಪೂಸಲು ಹಳದಿ ಮೈತುಂಬ|
ಕದವತೆರೆಯಿತು ಮನದ ಭಾವವು
ಮುದವ ನೀಡಿತು ತಾಣದಲ್ಲಿನ
ಮದುವೆ ಪರಿಸರ ಬಾಳಪುಟಗಳ ತೆರೆವ ಶುಭಘಳಿಗೆ||

ಹರುಷದಿಂದಲಿ ಜನರು ನಲಿದರು
ಕರದಿತುಂಬವು ಬಳೆಯ‌ತೊಟ್ಟರು
ಮೊರವ ತುಂಬುತಲುಲ್ಪಿಯಿಟ್ಟರು ಶರಣುಮಾಡುತಲಿ|
ನೆರೆದ ಮಂದಿಯು ಭಾಗಿಯಾದರು
ಸುರಗಿಪುಷ್ಪವಮಾಲೆ ತಂದರು
ಮರುಗ ಸೇರಿಸಿ ದಂಡೆಪೊಣಿಸಲು ಹೆರಳಸಿಂಗರಕೆ||

ಸುರಿಗೆನೀರನು ಸುರಿದು ಬಿಟ್ಟರು
ತೆರೆದ ಹಂದರದೊಳಗೆ ಜೋಡಿಗೆ
ನೆರೆದ ಜನದಲಿ ಜಳಕಮಾಡಿಸಿ ಖುಷಿಯಪಟ್ಠಿಹರು|
ತೊರೆದುಚಿಂತೆಯ ಬದುಕ ನಡೆಸಲು
ಹರಸಿಹಿರಿಯರು ವಧುವುವರರನು
ಚಿರದಿಬದುಕಿರಿ ನೂರುವರುಷವು ಸುಖದಿಸಾಗುತಿರಿ||

ಬಂಧು ಬಳಗವು ಸೇರಿಕೊಂಡರು
ಬಂಧಬೆಸೆಯಲು ಶುಭದಘಳಿಗೆಯು
ಬಂದುಬಿಟ್ಟಿತು ತಾಳಿಕಟ್ಟಲು ಶಿವನ ದಯೆಯಿಂದ|
ಬಂದು ಹೆಣ್ಣಿನಕಣ್ಣಿನಂಚಲಿ
ಬಿಂದುರೂಪದಕಣ್ಣನೀರದು
ತಂದೆತಾಯಿಯ ನೆನೆದು ತವರನು ಬಿಡುವ ಸಂಕಟಕೆ||

-ಧರಣೀಪ್ರಿಯೆ, ದಾವಣಗೆರೆ
*****