ಬಳ್ಳಾರಿ,ಸೆ.8 ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ವೇತನ- ಭವಿಷ್ಯ ನಿಧಿ ಪಾವತಿಯಲ್ಲಿ ಅಕ್ರಮ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಜಿಲ್ಲಾ ಸೆಷನ್ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸುವಂತೆ ಕರವೇ(ಪ್ರವೀಣಶೆಟ್ಟಿ ಬಣ) ಜಿಲ್ಲಾ ಘಟಕ ಒತ್ತಾಯಿಸಿದೆ.
ನಗರದ ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾ ಗೋಷ್ಠಿ ನಡೆಸಿದ ಜಿಲ್ಲಾ ಘಟಕದ ಅಧ್ಯಕ್ಷ ವಿ. ರಾಮಾಂಜನೇಯುಲು ಮತ್ತು ಜಿಲ್ಲಾ ಯುವ ಘಟಕದ ಅಧ್ಯಕ್ಷ ಕಟ್ಟೇಸ್ವಾಮಿ ಅವರು ಕುಲಪತಿ ಅವರು ಸಿಂಡಿಕೇಟ್ ಸದಸ್ಯ ಪ್ರೊ.ಜಯಪ್ರಕಾಶ್ ಗೌಡ ಅಧ್ಯಕ್ಷತೆಯಲ್ಲಿ ನೇಮಿಸಿರುವ ಸಮಿತಿಯನ್ನು ರದ್ದುಪಡಿಸಿ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಉನ್ನತ ಮಟ್ಟದ ಸಮಿತಿಯಲ್ಲಿ ಜಿಲ್ಲಾಮಟ್ಟದ ಕಾರ್ಮಿಕ ಅಧಿಕಾರಿ, ಜಿಲ್ಲಾ ವೇತನ ಭವಿಷ್ಯ ಅಧಿಕಾರಿಗಳು ಇರಬೇಕು ಎಂದು ತಿಳಿಸಿದರು.
ವಿವಿಯಲ್ಲಿ ಸುಮಾರು 160 ಜನ ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದು ಇವರಿಗೆ ನ್ಯಾಯವಾಗಿ ಸಲ್ಲಬೇಕಾದ ವೇತನ ಸಿಗುತ್ತಿಲ್ಲ. ಪಿ.ಎಫ್, ಇ ಎಸ್ ಐ ವಂತಿಕೆಯಲ್ಲಿ ಎರಡೂವರೆ ವರ್ಷಗಳಲ್ಲಿ ಸುಮಾರು ಒಂದೂವರೆ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆಪಾದಿಸಿದರು.
ಅವ್ಯವಹಾರದ ಬಗ್ಗೆ ಪ್ರಶ್ನಿಸಿದ ನಾಲ್ಕುಜನ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ವಜಾ ಗೊಳಿಸಲಾಗಿದೆ ಎಂದು ಕಟ್ಟೇಸ್ವಾಮಿ ದೂರಿದರು. ಈ ಕುರಿತಂತೆ ನೌಕರರು ತಮ್ಮ ಘಟಕದ ಮುಖಂಡರಲ್ಲಿ ಅಲವತ್ತು ಕೊಂಡ ಹಿನ್ನಲೆಯಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದೇವೆ ಎಂದರು.
ಹೊರಗುತ್ತಿಗೆ ನೌಕರರಿಗೆ ನ್ಯಾಯ ದೊರೆಯದಿದ್ದರೆ ವಿವಿಯ ಕುಲಪತಿ, ಕುಲಸಚಿವರು ಮತ್ತು ಹಣಕಾಸು ಅಧಿಕಾರಿಗಳ ವಿರುದ್ಧ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಕರವೇ ಜಿಲ್ಲಾ ಘಟಕ ಎಚ್ಚರಿಸಿದೆ.
ಸುದ್ದಿ ಗೋಷ್ಟಿಯಲ್ಲಿ ಕರವೇ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಎ.ಕೆ.ರಾಜು, ರೈತ ಘಟಕದ ಜಿಲ್ಲಾಧ್ಯಕ್ಷ ಶ್ರೀನಿವಾಸ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
*****