ಅನುದಿನ ಕವನ-೬೧೬, ಕವಯತ್ರಿ:ಲೀಲಾ ಅಪ್ಪಾಜಿ, ಮಂಡ್ಯ

 

ಕಾಯುತ್ತಾ ಕುಳಿತಿದ್ದಿರಿ
ಹರಿಹರಪುರದ ಸ್ಟೇಷನ್ನಿನಲ್ಲಿ ರೈಲಿಗಾಗಿ.
ಅಲ್ಲೆ ಹೊಂಚು ಹಾಕಿದವ
ಉಂಡ ಬಿರಿಯಾನಿ ಕರಗುವ ಮುನ್ನ.
ಏರುವ ರೈಲು ಬರುವ ಮುನ್ನ
ಹೊಸಕಿ ಹೊಯ್ದ
ಅಲ್ಲಾ, ಕತೆ ಮುಗಿಸದೆ ಹೋದಿರೆತ್ತ…
ಬಿಡಿ ಈ ನೆಲದಲ್ಲಿ ಕತೆ ಮುಗಿಯದಿದ್ದರೂ
ಅವರ ಕತೆ ಮುಗಿಸುತ್ತಾರೆ.
ಬಂದುಬಿಡಿ..
ತಂತಿ ಸಡಿಲಿಸಿದ ಸಿತಾರ್
ಮಿಡಿಸುವ ಬೆರಳಿಗಾಗಿ ಕಾಯುತ್ತಿದೆ.
ಗಾಳ ಹಾಕಿ ಧ್ಯಾನಸ್ಥರಾಗುವುದ ಮರೆತುಬಿಟ್ಟಿರಾ..
ಕಿವಿಯ ಕಿವಿ ನಿಮಿರಿಸುತಿದೆ
ನಿಮ್ಮ ಹೆಜ್ಜೆ ಸದ್ದಿಗಾಗಿ.
ಅಮ್ಮಾ ಕಾಯುತ್ತಲೇ ಇದ್ದರು…
ನೀವು ಬರಲೇ ಇಲ್ಲ
ಇನ್ನು ನಾನು ಅವರು ಇವರು…
ಎಲ್ಲರೂ ಎಲ್ಲ ಗಯ್ಯಾಳಿಗಳು,
ಮಂದಣ್ಣ, ಕರ್ವಾಲೋ, ಕಿವಿ, ಆನೆ…
ಎಲ್ಲರೂ ಕಾಯುತ್ತಲೇ ಇದ್ದೇವೆ…
ನೀವೂ ಕಾಯುತ್ತಿದ್ದೀರಾ…

-ಲೀಲಾ ಅಪ್ಪಾಜಿ, ಮಂಡ್ಯ
*****