“ಇದು ಪ್ರಾಂಜಲ ಅನುರಾಗದ ಅನಾವರಣದ ಕವಿತೆ. ನಿಜ ಒಲವಿನ ರಿಂಗಣಗಳ ಭಾವಗೀತೆ. ಇಲ್ಲಿ ಪ್ರೇಮದ ಆಂತರ್ಯದ ಅನನ್ಯ ಸೌಂದರ್ಯವಿದೆ. ಪ್ರೀತಿಯ ಸುಸ್ವರಗಳ ಅಪೂರ್ವ ಮಾಧುರ್ಯವಿದೆ. ಅಷ್ಟಕ್ಕೂ ನಿಜವಾದ ಪ್ರೀತಿಯೆಂದರೆ ತ್ಯಾಗದ ಅಮೂರ್ತ ರೂಪ. ನಿಸ್ವಾರ್ಥದ ದಿವ್ಯದೀಪ. ಏನಂತೀರಾ..?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಒಲವು..!
ನಿನ್ನೆದುರು ಗೆದ್ದು ಬೀಗುವುದಕ್ಕಿಂತ
ಸೋತು ಬಾಗುವುದರಲ್ಲಿದೆ ಸುಖ
ಸೋಲಿಸಿ ಕಂಗಳ ಹನಿಸುವುದಕಿಂತ
ಗೆಲ್ಲಿಸಿ ಮೊಗ ಮಿಂಚಿಸುವುದರಲ್ಲಿದೆ ನಾಕ.!
ಪ್ರಬುದ್ದನಾಗಿ ನಿಂತು ಮೆರೆವುದಕ್ಕಿಂತ
ಪೆದ್ದನಾಗಿ ಬೈಸಿಕೊಳ್ಳುವುದರಲ್ಲೇ ಆನಂದ
ಉಪನ್ಯಾಸ ನೀಡುವ ವಿದ್ವತ್ತಿನ ಗತ್ತಿಗಿಂತ
ಉಪದೇಶ ಕೇಳುವ ವಿನಯದಲ್ಲೇ ಮೋದ.!
ನಿನ್ನೆದುರು ಗುಡುಗಿ ರೇಗುವುದಕಿಂತ
ನಡುಗಿ ಚಡಪಡಿಸುವುದರಲ್ಲೇ ಮಜ
ನನ್ನಿಷ್ಟದಂತೇ ನಡೆಯಬೇಕೆನ್ನುವುದಕಿಂತ
ನಿನ್ನಿಷ್ಟದಂತೆ ನಡೆವುದರಲ್ಲೇ ಸಿಹಿ ಸಜ.!
ಕಟಕಿಯಾಡಿ ಕೆಣಕಿ ಕೆರಳಿಸುವುದಕಿಂತ
ನಗೆನುಡಿಯಾಡಿ ಅರಳಿಸುವುದರಲ್ಲಿದೆ ತೃಪ್ತಿ
ಎಲ್ಲದರಲ್ಲು ತಪ್ಪು ಹುಡುಕುವುದಕಿಂತ
ಎಲ್ಲ ಒಪ್ಪಿ ರಾಜಿಯಾವುದರಲ್ಲಿದೆ ಸಂತೃಪ್ತಿ.!
ಬದುಕೆಂದರೆ ನಾಲ್ಕುದಿನದ ಸಂತೆಯಿಲ್ಲಿ
ನಾನು ಮೊದಲೋ ನೀನು ಮೊದಲೋ
ಬಲ್ಲವರಾರು ವಿಧಾತನ ಆ ಬರಹದಲ್ಲಿ
ಇರುವಷ್ಟೇ ದಿನಗಳ ಜೊತೆಯಾಟವಿಲ್ಲಿ.!
ಘಾಸಿಗೊಳಿಸುತ ಬದುಕಿದರೇನು ಅರ್ಥ
ಸಿಹಿನೆನಪುಗಳುಳಿಸಿ ಹೋದರಷ್ಟೇ ಸಾರ್ಥ
ಮರೆಯಾದ ಮೇಲೂ ಈ ಜೀವ ಗೆಳತಿ
ಚಿರ ಮಧುರ ನೆನಪಾಗಾಬೇಕು ಪ್ರೀತಿ.!
-ಎ.ಎನ್.ರಮೇಶ್ ಗುಬ್ಬಿ,
*****