ಅನುದಿನ ಕವನ-೬೨೫, ಕವಿ: ಲೋಕಿ (ಲೋಕೇಶ್ ಮನ್ವಿತ), ಬೆಂಗಳೂರು

ನೀ ಆವರಿಸುವ
ಒಂದು ಸುಳಿವು
ಸಿಗಲಾರದೇ
ಬದುಕು ದೂಡುತ್ತಿದ್ದೆ

ಕೊನೆಯ ದಿನವೆಂಬಂತೆ
ಸಾಗುತ್ತಿದ್ದ ಹಾದಿಯಲ್ಲಿ
ಕಾಣದೊಂದು
ತಿರುವಿನಲ್ಲಿ ಕಂಡ
ಹೂವು ನೀನು
ಕಾಲಿಗಿನ್ನು
ಚಲಿಸುವ ದೌರ್ಬಲ್ಯ!

ಸಂಪರ್ಕ ಕಳೆದು
ಕೊಂಡಿದ್ದ ರಸ್ತೆಗಿಲ್ಲಿ
ಮತ್ತೇ
ಮೈಲುಗಲ್ಲಿನ ಭಾಗ್ಯ

ಕಪ್ಪನೆಯ ಡಾಂಬಾರು
ಬಳಿದುಕೊಂಡ
ಎದೆಯ ಹಾದಿಯಲ್ಲಿ
ಪಾರಿಜಾತ ಹೂಗಳಿಗೆ
ಮರು ಜೀವ

ಅಗತ್ಯಕ್ಕಿಂತ ಆವರಿಸಿದ
ನಿನ್ನಲ್ಲೊಮ್ಮೆ ಕೂತು
ಕೇಳಿಕೊಳ್ಳಬೇಕಿದೆ
ಕಂಗಳನ್ನಷ್ಟೇ ನೋಡಿಕೊಳ್ಳುವೆ
ಎದುರು ಕೂತು ಬಿಡು
ಉಳಿದ ಬದುಕಿಗಿಲ್ಲಿ
ಬರವೆಂದೂ ಕಾಡದು
ಬದುಕಿರುವವರೆಗೂ

-ಲೋಕಿ (ಲೋಕೇಶ್ ಮನ್ವಿತ), ಬೆಂಗಳೂರು
*****