ಡಾ. ಅಂಬೇಡ್ಕರ್ ಓದು ಕಾರ್ಯಕ್ರಮ: ಪ್ರತಿದಿನ 57 ಸಾವಿರ ಕೋಟಿ ರೂ. ಜಿ ಎಸ್ ಟಿ ಯಿಂದ ಸಂಗ್ರಹ, ದೇಶದಲ್ಲಿ ಶೇ. 30ರಷ್ಟು ಜನರಿಗೆ ಮನೆಯಿಲ್ಲ – ಡಾ. ಆರ್ ವಿ ಚಂದ್ರಶೇಖರ್ ವಿಷಾಧ

ಬಳ್ಳಾರಿ, ಸೆ.18:ಭಾರತೀಯ ಸಂವಿಧಾನ, ಕಾನೂನಿನ ಬಗ್ಗೆ ದೇಶದ ಶೇ. 80ರಷ್ಟು ಜನರಿಗೆ ಅರಿವೇ ಇಲ್ಲ ಎಂದು ಬೆಂಗಳೂರಿನ‌ ರಾಷ್ಟ್ರೀಯ ಕಾನೂನು ಶಾಲೆ ಭಾರತ ವಿದ್ಯಾಲಯದ ತಳಸಮುದಾಯಗಳ ಅಧ್ಯಯನ ಕೇಂದ್ರದ ಸಹಾಯಕ‌ ಪ್ರಾಧ್ಯಾಪಕ ಡಾ. ಆರ್. ವಿ. ಚಂದ್ರಶೇಖರ ರಾಮೇನಹಳ್ಳಿ ಅವರು ವಿಷಾಧಿಸಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಳ್ಳಾರಿ ಹಾಗೂ ನಗರದ
ಶ್ರೀ ಸತ್ಯಂ ಶಿಕ್ಷಣ(ಬಿ.ಇಡಿ) ಮಹಾವಿದ್ಯಾಲಯ ಸಹಯೋಗದಲ್ಲಿ ಶನಿವಾರ ಕಾಲೇಜು ಸಭಾಂಗಣದಲ್ಲಿ ಜರುಗಿದ ಡಾ. ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ದೇಶದ ಸಂವಿಧಾನ ಪ್ರಜೆಗಳ ಬದುಕಿನ‌ ಕ್ರಮವಾಗದೇ ಹೋದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ ಎಂದು ಸಂವಿಧಾನ ಶಿಲ್ಪಿ ಬಾಬಾಸಾಹೇಬ ಡಾ.‌ಬಿ ಆರ್ ಅಂಬೇಡ್ಕರ್ ಅವರು‌ ಹೇಳಿದ್ದನ್ನು ನೆನಪಿಸಿದರು.
ಸ್ವಾತಂತ್ರ್ಯ ಬಂದು 75ವರ್ಷಗಳಾದರೂ ನೂರು ವರ್ಷಗಳ ಹಿಂದೆ ಡಾ.‌ಅಂಬೇಡ್ಕರ್ ಅವರು ಮಾಡಿದ್ದ ಹೋರಾಟಗಳನ್ನು ಪ್ರಸ್ತುತ ದಿನಗಳಲ್ಲೂ ಮುಂದುವರೆಸ ಬೇಕಿರುವುದು ನೋವಿನ ಸಂಗತಿ ಎಂದರು.
ಜಾತೀಯತೆ ದೇಶದಲ್ಲಿ ಹೋಗಿಲ್ಲ. ಬೇರೆ ಸ್ವರೂಪದಲ್ಲಿ ತಾಂಡವ ವಾಡುತ್ತಿದೆ ಎಂದು ಡಾ. ಚಂದ್ರಶೇಖರ ಹೇಳಿದರು.
ಪ್ರತಿದಿನವೂ 57 ಸಾವಿರ ಕೋಟಿ ರೂ. ಜಿ ಎಸ್ ಟಿ ಯಿಂದ ಸಂಗ್ರಹವಾಗುತ್ತಿದ್ದರೂ ದೇಶದಲ್ಲಿ ಶೇ. 30ರಷ್ಟು ಜನರಿಗೆ ಮನೆಯಿಲ್ಲ. ವಿಶ್ವದ ಎರಡನೇ ಶ್ರೀಮಂತ ಇರುವ ದೇಶದಲ್ಲಿ ನೂರಕ್ಕೆ 9 ಜನರಿಗೆ ಊಟ ಇಲ್ಲ ಎಂದು ಕಟಕಿಯಾಡಿದರು.
ದೇಶದಲ್ಲಿ ಶಿಕ್ಷಣ, ಭೂಮಿ ರಾಷ್ಟ್ರೀಕರಣವಾಗಬೇಕು, ನೈಸರ್ಗಿಕ ಸಂಪತ್ತು ಸರಕಾರದ ಒಡೆತನದಲ್ಲಿ ಇರಬೇಕು ಎನ್ನುವ ಡಾ. ಅಂಬೇಡ್ಕರ್ ಅವರ ಆಶಯ ಈಡೇರದೇ ಇರುವುದು ದೇಶ ಹಲವು ಸಂಕಷ್ಟಗಳಿಗೆ ಗುರಿಯಾಗಿದೆ ಎಂದು ತಿಳಿಸಿದರು.


ಕಾರ್ಯಕ್ರಮ ಉದ್ಘಾಟಿಸಿದ ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಅವರು ಮಾತನಾಡಿ ಸಾಮಾಜಿಕ ಸಮಸ್ಯೆಗಳ ಮಧ್ಯೆಯೂ ಸಾಧನೆ ಮಾಡಿ ದೇಶಕ್ಕೆ ಶ್ರೇಷ್ಠ ಸಂವಿಧಾನ‌ನೀಡಿದ ಬಾಬಾಸಾಹೇಬ ಡಾ. ಬಿ ಆರ್ ಅಂಬೇಡ್ಕರ್ ಅವರ‌ ಬದುಕು, ಹೋರಾಟ ವಿದ್ಯಾರ್ಥಿ-ಯುವ ಜನರಿಗೆ ‌ಮಾದರಿ ಎಂದರು.
ವಿಶ್ವದಲ್ಲೇ ಶ್ರೇಷ್ಠ ಭಾರತೀಯ ಸಂವಿಧಾನ ದೇಶ ಸದೃಢ ರಾಷ್ಟ್ರವಾಗಿ ಹೊರ ಹೊಮ್ಮಲು ಸಾಧ್ಯವಾಗಿದೆ. ಸರ್ವರಿಗೂ ಸಮಾನ ಹಕ್ಕು ನೀಡಿದೆ ಎಂದು ಹೇಳಿದರು. ಎಲ್ಲಾ ಜಾತಿಯ ಜನರು ಇಂದು ಮೀಸಲಾತಿಯ ಫಲಾನುಭವಿಗಳಾಗಿದ್ದಾರೆ. ಡಾ. ಅಂಬೇಡ್ಕರ್ ಅವರ ಸಂವಿಧಾನ ಮತದಾನ ಸೇರಿದಂತೆ ಸರ್ವರಿಗೂ ಸಮಾನ ಹಕ್ಕು ನೀಡಿದೆ ಎಂದರು.
ಬಹುಮುಖಿ ಡಾ.‌ಅಂಬೇಡ್ಕರ್ ಶ್ರೇಷ್ಠ, ಧೀಮಂತ ಪತ್ರಕರ್ತರಾಗಿದ್ದರು. ತಮ್ಮ ಸಾರ್ವಜನಿಕ ಜೀವನವನ್ನು ಪತ್ರಿಕೋದ್ಯಮಿಯಾಗಿ ಆರಂಭಿಸಿದ್ದರು ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ವಿ ಅಶ್ವ ರಾಮಾಂಜನೇಯ ಅವರು, ಆದರ್ಶ ಪ್ರಾಧ್ಯಾಪಕರಾಗಿದ್ದ ಡಾ. ಬಿ ಆರ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರಶಿಕ್ಷಣಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.


ಸನ್ಮಾನ: ಇದೇ ಸಂದರ್ಭದಲ್ಲಿ ಡಾ.‌ಆರ್ ವಿ ಚಂದ್ರಶೇಖರ್ ಮತ್ತು ಸಿ.ಮಂಜುನಾಥ್ ಅವರನ್ನು ಕಾಲೇಜು ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.
ಅಂಬೇಡ್ಕರ್ ಮತ್ತು ಸಂವಿಧಾನ ಕುರಿತು ಏರ್ಪಡಿಸಿದ್ದ ಭಾಷಣ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕಾಲೇಜಿನ‌ ವಿದ್ಯಾರ್ಥಿಗಳಿಗೆ ಗಣ್ಯ ಅತಿಥಿಗಳು ಪುಸ್ತಕ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ ಹನುಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಎನ್. ಶ್ರೀಕಾಂತ ಮುನಿ ಅವರು ಅತಿಥಿಗಳನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕರಾದ ನಾಗೇಶಬಾಬು, ಆಲಂಬಾಷ, ನಾಗರಾಜ ರಾವ್, ರೆಡ್ಡಿ ಹಳ್ಳಿ ಗಿರಿಜಾ, ಆರ್ ಚಂದ್ರಶೇಖರ್, ಮಲ್ಲಿಕಾರ್ಜುನ, ಚಂದ್ರಶೇಖರ್ ನಾಯ್ಡು, ಸುಲೋಚನಾ
ಮತ್ತಿತರರು ಉಪಸ್ಥಿತರಿದ್ದರು.


ಬಿ.ಇಡಿ ಪ್ರಥಮ‌ ವರ್ಷದ ಪ್ರಶಿಕ್ಷಣಾರ್ಥಿ
ಪ್ರಸಾದ್ ಪಿ ಮಾಲಗಿತ್ತಿ ಮಠ ಪ್ರಾರ್ಥಿಸಿದರು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ಸುಷ್ಮಾ ಸ್ವಾಗತಿಸಿದರು.
ಪ್ರಥಮ ಬಿ. ಇಡಿ., ಪ್ರಶಿಕ್ಷಣಾರ್ಥಿ ಸುಚಿತ್ರ ಸಿ. ವಂದಿಸಿದರು.
ಭೀಮೇಶ ಡಿ ಹಾಗೂ ಪ್ರಸಾದ್ ಪಿ ಮಾಲಗಿತ್ತಿಮಠ ನಿರೂಪಿಸಿದರು. ಕಾಲೇಜಿನ ಸರ್ವ ಬೋಧಕ ಹಾಗೂ ಬೋಧಕೇತರರ ಸಿಬ್ಬಂದಿ. ಉಪಸ್ಥಿತರಿದ್ದರು.


ವಿಜೇತರು: ಭಾಷಣ ವಿಭಾಗ : ಪ್ರಥಮ ಸ್ಥಾನ ರಾಮಕೃಷ್ಣ ಕೆ, ದ್ವಿತೀಯ ಭೀಮೇಶ ಡಿ, ತೃತೀಯ ಸ್ಥಾನ ಪ್ರಸಾದ್ ಪಿ ಮಾಲಗಿತ್ತಿ ಮಠ
ಪ್ರಬಂಧ ಸ್ಪರ್ಧೆ: ಪ್ರಥಮ ಸ್ಥಾನ ಪವಿತ್ರ ಪಿ ಎನ್ ಹಾಗೂ ಪ್ರಸಾದ್ ಪಿ ಮಾಲಗಿತ್ತಿ ಮಠ, ದ್ವಿತೀಯ ಸ್ಥಾನ ಮೋನಿಕ ಎನ್ ಹಾಗೂ ಲಾವಣ್ಯ ಟಿ, ತೃತೀಯ ಸ್ಥಾನ ರಾಜೇಶ್ವರಿ ಕೆ ದೇವೇಂದ್ರ.
*****