ಬಳ್ಳಾರಿ, ಸೆ. 19: ಸುಮಾರು ಐದು ಸಾವಿರ ಪ್ರೇಕ್ಷಕರು ಕುಳಿತು ಕಾರ್ಯಕ್ರಮ ವೀಕ್ಷಣೆಗೆ ಅನುಕೂಲವಾಗುವಂತೆ 25 ಕೋಟಿ ರೂ. ವೆಚ್ಚ ದಲ್ಲಿ ನಗರದಲ್ಲಿ ವಿಶಾಲವಾದ ಆಡಿಟೋರಿಯಂ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.
ಸ್ಥಳೀಯ ಶ್ರೀ ಮಂಜುನಾಥ ಲಲಿತಕಲಾ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಗರದ ರಾಘವ ಕಲಾಮಂದಿರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ “ಗೀಗಿ ಜಕ್ಕಣಕ್ಕ” ದೇಸಿಪದ ಮತ್ತು ಹೆಜ್ಜೆಗಳ ಕಲರವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಪ್ರತ್ಯೇಕ ನಿಧಿಯೊಂದನ್ನು ಸ್ಥಾಪಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರಿಗೆ ಆಸಕ್ತಿ ಇದೆ. ಜಿಲ್ಲಾಧಿಕಾರಿಗಳು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
ಮಂಜುನಾಥ ಗೋವಿಂದವಾಡ ಅವರು ಪ್ರತಿಭಾವಂತ ಚಿತ್ರಕಲಾವಿದರು. ಉತ್ತಮ ಸ್ವಾಭಿಮಾನಿ ಸಂಘಟಕರು. ಯಾವುದೇ ಸ್ವಾರ್ಥ, ನಿರೀಕ್ಷೆಗಳಿಲ್ಲದೆ ಕಾರ್ಯಕ್ರಮ ಸಂಘಟಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗೋವಿಂದವಾಡ ಅವರ ಕಲೆ ಮತ್ತು ವೇದಿಕೆ ನಿರ್ಮಾಣದ ಕಾರ್ಯ ವಿಭಿನ್ನ ಮತ್ತು ವಿಶಿಷ್ಟವಾದದ್ದು. ಇವರ ಕಲೆ ಮತ್ತಷ್ಟು ವೇದಿಕೆಗಳಲ್ಲಿ ಪ್ರದರ್ಶನವಾಗಲಿ , ಅನೇಕ ಸಾಧನೆಗಳು ಇವರ ಮುಡಿಗೇರಲಿ ಹಾಗೂ ಹಂಪಿ ಉತ್ಸವದಂತಹ ವೇದಿಕೆಯನ್ನು ನಿರ್ಮಾಣ ಮಾಡುವ ಇವರ ಕಲೆ ಅದ್ಭುತವಾದದ್ದು, ಸಾಕ್ಷಾತ್ ಹಂಪಿಯ ಶಿಲ್ಪ ಶೈಲಿಯನ್ನು ಇವರ ವಿನ್ಯಾಸಗಳಲ್ಲಿ ಕಾಣಬಹುದು ಎಂದು ಪ್ರಶಂಸಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪ ನಿರ್ದೇಶಕ ಟಿ. ಚೋರನೂರು ಕೊಟ್ರಪ್ಪ ಮಾತನಾಡಿ,
ಕುಂಚ ಕಲಾವಿದ, ಶ್ರಮಜೀವಿ ಮಂಜುನಾಥ್ ಗೋವಿಂದವಾಡ ಅವರು ಪ್ರತಿಭಾವಂತ ಸಾಧಕರು. ಬಳ್ಳಾರಿ ಬದಲು ಬೆಂಗಳೂರಿನಲ್ಲಿದ್ದಿದ್ದರೆಲಕ್ಷ, ಕೋಟಿ ರೂ. ಸಂಪಾದಿಸುತ್ತಿದ್ದರು. ಜಿಲ್ಲೆಯ ಪ್ರೀತಿಯಿಂದ ಇಲ್ಲೇ ಕಲಾ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣವರ್,
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಪ್ರಭುದೇವ ಕಪ್ಪಗಲ್, ಶ್ರೀ ಎಸ್. ಎಂ. ಸಿದ್ದೇಶ್ ಮಾತನಾಡಿದರು.
ಜಾನಪದ ಗಾಯಕ ಯಲ್ಲನಗೌಡ ಶಂಕರಬಂಡೆ, ಪತ್ರಕರ್ತ ಕೆ.ಎಂ. ಮಂಜುನಾಥ್ , ಷಡಕ್ಷರಿ ಸ್ವಾಮಿ, ಜೆ.ಎಂ ಬಸವರಾಜ್ ಸ್ವಾಮಿ, ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಎಚ್. ತಿಪ್ಪೇಸ್ವಾಮಿ, ನೃತ್ಯ ಗುರಿ ಎಸ್.ಕೆ.ಆರ್ ಜಿಲಾನಿಭಾಷ ಅವರು ಅತಿಥಿಗಳಾಗಿ ವೇದಿಕೆಯಲ್ಲಿದ್ದರು.
ಪ್ರಶಸ್ತಿ ಪ್ರದಾನ: ಬೆಳಗಲ್ಲು ಜೆ.ಎಂ.ಬಸವರಾಜ ಸ್ವಾಮಿ ಅವರಿಗೆ ಜನಮುಖಿ ಸೇವಾ ಪ್ರಶಸ್ತಿ, , ಕು.ಸಮೀರಾ ಎಸ್.ಕೆ ಅವರಿಗೆ ನೃತ್ಯಶ್ರೀ ಹಾಗು ಕು.ಮಯೂಕ ಅವರಿಗೆ ನಾಟ್ಯಶ್ರೀ ಪ್ರಶಸ್ತಿ ನೀಡಿ ಗಣ್ಯರು ಗೌರವಿಸಿದರು. ಸಂಸ್ಥೆಯ ಅಧ್ಯಕ್ಷ ಮಂಜುನಾಥ ಗೊವಿಂದವಾಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ವಿನೋದ್.ಎಂ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಅನುಮಯ್ಯ ಮತ್ತು ಸಂಗಡಿಗರಿಂದ ಜಾನಪದ ಗೀತೆಗಾಯನ, ಶ್ರೀ ಲಕ್ಷ್ಮಿ ಕಲಾ ಕ್ಷೇತ್ರದ ವಿದ್ಯಾರ್ಥಿಗಳಿಂದ ಜಾನಪದ ನೃತ್ಯಗಳು , ಚಂದ್ರು ಬಸಾಪುರ ನೇತೃತ್ವದ ಮಕ್ಕಳ ಡೊಳ್ಳು ಕುಣಿತ ಮತ್ತು ಶ್ರೀ ಹೆಚ್. ತಿಪ್ಪೇಸ್ವಾಮಿ ತಂಡದಿಂದ ಬಯಲಾಟದ ದೃಶ್ಯಗಳು ಮನಸೂರೆಗೊಂಡವು.
*****