ದುಃಖದ ಕಣ್ಣುಗಳಲಿ
ಉರಿಯುತಿವೆ ಉಲ್ಕೆಗಳು
ಯಾರು ಬೆಳೆವರೋ
ಇಲ್ಲಿ ಪುಟ್ಟ ಹೂವೊಂದನ್ನು
ಹೊಸ ನಾರಿನಿಂದ ಹೆಣೆವರೋ
ನೇಣು ಹಗ್ಗಗಳನ್ನು
ಸಾಗಿದೆ ದಾರಿ
ಹಗಲೊಳಗೆ ತಲೆಯಿಟ್ಟು
ಇರುಳೊಳಗೆ ಕಾಲು ಚಾಚೀ
ಹಾದಿಗೆ
ಮುಳ್ಳ ನೆಡುವವರ ಸಂತಾನ
ಬೆಳೆಯುತಿದೆ
ಕತ್ತಲಲಿ ಬೆಳಕಿನ ಬೀಜವ
ಬಿತ್ತುವ ಜನರೆಲ್ಲಿ?
ನಾವು ನೆಟ್ಟ ನೆರಳು
ಮುಳ್ಳಾದವರ ಸಂತೈಸಲಿ
ಮುಳ್ಳೆಲ್ಲಾ ಮುರಿದು
ಹೊತ್ತಿ ಉರಿದು
ಹಾದಿ ಹಸನಾಗಲಿ
ದುರಾಸೆಯ ಹಿಮದ ಕತ್ತಿ
ತಣ್ಣನೆಯ ಸುಖ ನೀಡಿದೆ
ಕಣ್ಣೆದುರೆ ಇರಿದು ಕೊಂದು
ಸಾಕ್ಷಿಯ ಕರಗಿಸಿದೆ
ಆ ಗಾಳಕಾರ ಮೀನ ಸವರಿ
ಕತ್ತಿ ಮಸೆಯುತ್ತಿರುವ
ಜೀವ ಮೊದಲಳಿದು
ಗಾಳಕಾರನ ಬಲಿ ಪಡೆಯುತಿದೆ
ಪ್ರಶ್ನಯೇ ಘೋರವಾಗಿ
ಅನೂದಿನವೂ ಬೆಳೆಯುತಿದೆ
ಪ್ರಶ್ನೆಯನೆ ಚಾಪೆಯೂಗಿಸಿ
ನಾಳೆಯ ದಿಂಬಾಗಿಸುವೆ
ಮುಗಿಲನ್ನು ಬೆಳಗಿ
ನಕ್ಷತ್ರಗಳು ಹೊಳೆಯುತಿವೆ
ನಮ್ಮತ್ತ ಒರಗಿ
ನೆಲದಲ್ಲೇ ಮಿನುಗುತಿವೆ
-ನಾಗತಿಹಳ್ಳಿ ರಮೇಶ್, ಬೆಂಗಳೂರು
*****