ನಡೆವ ಕಾಲಿಗೆ ತಡೆಬೇಲಿ;ಹಾರುವ ರೆಕ್ಕೆಗಲ್ಲ
ರೆಕ್ಕೆಗಳಿರುವುದೇ ಹೂವಿಂದ ಹೂವಿಗೆ ಹಾರಿ
ಮಕರಂದ ಹೀರಿ ಸುಖಿಸಲು; ಮತ್ತೆ ಮತ್ತೆ ಹೊಸ
ಹೂವು ಹೊಸ ಸುಖ.ಇದನ್ನೇ ಕಂಡದ್ದು,ಕಂಡದ್ದೇ ನಂಬಿದ್ದು.ಹಾರುವ ದುಂಬಿಗಷ್ಟೇ ಗೊತ್ತು,
ಹೊಸಹೊಸತಾಗಿ ಅರಳುವ,ಅರಳಿ ಆಹ್ವಾನಿಸುವ
ಹೂಗಳಿಗೇನು ಬರ? ತೋಟ ಸದಾ ಸಮೃದ್ಧ.
ಬಾಡಿರುವ ಹೂಗಳ ತೋಟದಿಂದ ಎಲ್ಲರೂ ನಿರ್ಗಮಿಸುತ್ತಾರೆ.ಸಂಜೆಗಳಿಗೆಲ್ಲಿಯ ಧಾವಂತ?
ಅರಳಿದ ಹೂಗಳ ಸೆಳೆತದಿಂದ ಪಾರಾದಾಗಲೇ
ಬೇಲಿಯಾಚೆಗಿನ ಲೋಕ.ಸುಖದ ಹೂಗಳ
ಸೆಳೆತದಿಂದ ಪಾರಾಗುವುದು ಅಷ್ಟು ಸುಲಭವೆ?
ರೆಕ್ಕೆಯಿದ್ದವರಿಗೆಲ್ಲಾ ಹಾರುವ ದಿಕ್ಕು ದಕ್ಕುವುದಿಲ್ಲ.
ರಾತ್ರಿಯಾದರೂ ಕಾಯುತ್ತವೆ ಮತ್ತೊಂದು ಬೆಳಗಿಗೆ;
ಅರಳುವಿಕೆಗೆ.ಆಹ್ವಾನಕ್ಕೆ ತೋಟ ಸುತ್ತುತ್ತಾ.
ಹೆಚ್ಚಿಸಿಕೊಳ್ಳುತ್ತಾ ಸಂಖ್ಯೆ, ತನ್ನ ಸಾಧನೆಗೆ ತಾನೇ
ಬೀಗುತ್ತಾ ಸಾಗುವ ದುಂಬಿ ತೋಟದಲ್ಲೇ ಬಂಧಿ.
ಹೂವಿಗೂ ಮುತ್ತಿಗೂ ಮತ್ತಿಗೂ ತೂಗುತ್ತಾ,ಮತ್ತೀಗ
ತನ್ನ ಸುತ್ತಾ ತಾನೇ ನೇಯುತ್ತಾ; ಪರಿಭ್ರಮಣ ಸುಖ.
ನಡೆವ ಕಾಲಿಗಷ್ಟೇ ತಡೆಬೇಲಿ; ಹಾರುವ ರೆಕ್ಕೆಗಲ್ಲ!
ನೆಲಕ್ಕಂಟಿದ ಇರುವು.ಅರಿವಿನ ಆಕಾಶಕ್ಕೆ;ರೆಕ್ಕೆಬಿಚ್ಚು.
ಕಂಪಿನ ಕರೆಯಿಂದ ವಿಮುಖರಾದಾಗಲೇ ಅರಳುವುದು
ಸಹಸ್ರದಳ ಕಮಲ.ಬಾಡುವುದು ಹೂವು ಪ್ರಖರ ಮ-
ಧ್ಯಾನದಲ್ಲಿ.ಹಾರುವುದು ದುಂಬಿ ಬೇಲಿಯಾಚೆಗಿನ ಬಯಲಿನಲ್ಲಿ.
-ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಮಂಗಳೂರು
*****