ಅನುದಿನ‌ಕವನ-೬೨೯, ಕವಿ: ಎಲ್ವಿ (ಡಾ. ಲಕ್ಷ್ಮಣ‌ ವಿ.ಎ) ಬೆಂಗಳೂರು

ಗೆಳತಿ ಅವಳು
ಲೋಕ ಎಳೆದ ಸರಹದ್ದು
ಮೀರಬೇಡ ಎನ್ನುತ್ತಾಳವಳು
ನಾನು ರೆಕ್ಕೆ ಸುಟ್ಟುಕೊಂಡ ಪಾರಿವಾಳ, ಎಲೆಕ್ಟ್ರಿಕ್ ಬೇಲಿ ಹಾರಿ
ಬರುವವ

ಅವರವರ ಕನ್ನಡಕಗಳ ನೋಟಕೆ
ಸರಿಯಾಗಿ ಎಳೆದಂತೆ ಕಾಣುವ
ನೇರ
ಗೆರೆಗಳು ನನಗೆ ಒಪ್ಪಿತವಿಲ್ಲ
ಅಸಲು ನನಗೆ ಗಡಿಗಳೇ ಇಲ್ಲ

ಆಗಸದಲ್ಲಿ ಅಲ್ಲಲ್ಲಿ
ಚದುರಿದ ಚುಕ್ಕಿಗಳ ನೋಡಿ
ಆ ಚುಕ್ಕಿಗಳಿಗೆ
ಅಡ್ಡಾ ದಿಡ್ಡಿ ಗೆರೆ ಎಳೆದು ಚಿತ್ರ ಬಿಡಿಸಿ
ಆಡುವ ಮಕ್ಕಳ ಕೈಗಳಿಗೆ ಕೊಡುವವ

ಕಾಡಿನಲ್ಲಿ ಬೆಳೆದ
ಬೇಲಿಯ ಮೇಲಿನ ಹೂವು ನಾನು
ಕರುಳ ಬಳ್ಳಿ ಕಿತ್ತು
ಬೆಳಕಿರದ ನಿಮ್ಮ ಮನೆಯ ಕುಂಡದೊಳಗೆ
ಬೇರಿಳಿಯಲಾಗದು
ನೀವೆಷ್ಟೇ ನೀರೆರೆದರೂ
ಹೂವು ಅರಳಿಸಲಾಗದು

ಹಕ್ಕಿ ನಾನು ಚುಕ್ಕಿ ನಾನು
ಹೂವು ನಾನು
ಕನ್ನಡಕ ಹಾಕಿ ನಿಮ್ಮ‌ ಭೂಪಟದಲ್ಲಿ
ದಯವಿಟ್ಟು ನನ್ನ ಹುಡುಕಬೇಡಿ
ಅಂತ ಅವರಿಗೆ ಹೇಳೆ ಗೆಳತಿ.


-ಎಲ್ವಿ (ಡಾ. ಲಕ್ಷ್ಮಣ‌ವಿ.ಎ) ಬೆಂಗಳೂರು
*****