ಬಳ್ಳಾರಿ, ಸೆ.23: ಜಾನಪದ, ರಂಗಭೂಮಿಗೆ ಗಣನೀಯ ಸೇವೆ ಸಲ್ಲಿಸಿರುವ ಅಂತಾರಾಷ್ಟ್ರೀಯ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಹಿರಿಯ ಬಯಲಾಟ ಕಲಾವಿದೆ ಸುಜಾತಮ್ಮ ಅವರಿಗೆ ಕ್ರಮವಾಗಿ ಕೇಂದ್ರ ಸರಕಾರ ಪದ್ಮ ಪ್ರಶಸ್ತಿ ಹಾಗೂ ರಾಜ್ಯ ಸರಕಾರ ಶ್ರೀ ಮಹರ್ಷಿವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮಂಜುನಾಥ್ ಒತ್ತಾಯಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಮತ್ತು ಶ್ರೀ ಸತ್ಯಂ ಶಿಕ್ಷಣ(ಬಿ.ಇಡಿ) ಮಹಾವಿದ್ಯಾಲಯದ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಾನಪದ ಲೋಕ ಹಾಗೂ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು ಸಂಸ್ಥಾಪಕ ಡಾ.ಎಚ್ ಎಲ್ ನಾಗೇಗೌಡ ಅವರ ಸಂಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಮ್ಮ ಪ್ರತಿಭೆ ಸಾಧನೆಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದಿರುವ 93ರ ಹರೆಯದ ನಾಡೋಜ ಬೆಳಗಲ್ಲು ವೀರಣ್ಣ ಅವರಿಗೆ ಕೇಂದ್ರ ಸರಕಾರ ಪದ್ಮ ಪ್ರಶಸ್ತಿ, ಬಯಲಾಟ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿರುವ ಹಿರಿಯ ಬಯಲಾಟ ಕಲಾವಿದೆ, ರಾಜ್ಯೋತ್ಸವ ಪ್ರಶಸ್ತಿ ಪ್ರರಸ್ಕೃತೆ 73 ವರ್ಷದ ಸುಜಾತಮ್ಮ ಅವರಿಗೆ ಈ ಬಾರಿಯ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಜಾನಪದ ಕಲೆಗಳ ಬಗ್ಗೆ ಒಲವು ಮೂಡಿಸಲು ಪರಿಷತ್ತು ಜಿಲ್ಲೆಯ ಶಾಲೆ ಕಾಲೇಜುಗಳಲ್ಲಿ ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜನೆ ಹಾಕಿಕೊಂಡಿದ್ದು, ಸಂಬಂಧಿಸಿದ ಇಲಾಖೆಗಳು ಸಹಯೋಗ ನೀಡಿ ಸಹಕರಿಸ ಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ನಾಡೋಜ ಬೆಳಗಲ್ಲು ವೀರಣ್ಣ ಅವರು ಮಾತನಾಡಿ, ವಿದ್ವಾಂಸ ನಾಡೋಜ ಡಾ. ಎಚ್ ಎಲ್ ನಾಗೇಗೌಡ ಅವರು ಸ್ಥಾಪಿಸಿರುವ ರಾಮನಗರದ ಜಾನಪದ ಲೋಕದ ಅಭಿವೃದ್ಧಿಗೆ ರಾಜ್ಯ ಸರಕಾರ ಅಗತ್ಯ ಆರ್ಥಿಕ ನೆರವು ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಕಳೆದ ವಾರ ಪತ್ರಿಕೆಗಳಲ್ಲಿ ಬಂದ ‘ಜಾನಪದ ಲೋಕ ಮುಚ್ಚುವ ಸ್ಥಿತಿಗೆ’ ಓದಿ ಅಘಾತವಾಗಿತ್ತು. ಈ ಕುರಿತು ವಿಧಾನ ಪರಿಷತ್ತಿನಲ್ಲಿ ಚರ್ಚೆ ನಡೆದು ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿರುವುದು ತಮಗೆ ಸಂತೋಷ ನೀಡಿದೆ ಎಂದರು.
ಜಾನಪದ ಲೋಕದ ಪುನಶ್ಚೇತನವಾದಷ್ಟು ನೂರಕ್ಕೆ ನೂರಷ್ಟಿರುವ ಬಡ ಜನಪದ ಕಲಾವಿದರಿಗೂ ಸಹಾಯವಾಗುತ್ತದೆ ಎಂದು ಹೇಳಿದರು.
ರಂಗ ಕಲಾವಿದನಾಗಿದ್ದ ತಾವು ಜಾನಪದ ಕ್ಷೇತ್ರದತ್ತ ಹೊರಳಲು, ಇಲ್ಲಿ ಅಪಾರ ಯಶಸ್ಸು ಕಾಣಲು ಹಿರಿಯ ಐಎಎಸ್ ಅಧಿಕಾರಿಗಳಾಗಿದ್ದ ವಿಜಯ ಸಾಸನೂರ ಹಾಗೂ ಜಾನಪದ ವಿದ್ವಾಂಸ ಡಾ. ಎಚ್ ಎಲ್‌ನಾಗೇಗೌಡ ಅವರ ಉತ್ತೇಜನವನ್ನು ನೆನೆದು ಭಾವುಕರಾದ ನಾಡೋಜ ಬೆಳಗಲ್ಲು ವೀರಣ್ಣ ಅವರು ಎರಡು ದಶಕಗಳ ಕಾಲ ಅವರೊಂದಿಗೆ ಒಡನಾಟವನ್ನು ಸ್ಮರಿಸಿದರು.
ಕರ್ನಾಟಕ ಜಾನಪದ ಪರಿಷತ್ತು ತಮಗೆ ಈ ಹಿಂದೆಯೇ ರಾಷ್ಟ್ರೀಯ ಪ್ರಶಸ್ತಿ ನೀಡಿ ಉತ್ತೇಜಿಸಿದ್ದನ್ನು ನೆನಪು ಮಾಡಿ ಕೊಂಡರು.
ಸನ್ಮಾನ: ಇದೇ ಸಂದರ್ಭದಲ್ಲಿ ನಾಡೋಜ ಬೆಳಗಲ್ಲು ವೀರಣ್ಣ ಮತ್ತು ಸುಜಾತಮ್ಮ ಅವರನ್ನು ಪರಿಷತ್ತು ಜಿಲ್ಲಾ ಘಟಕ ಹಾಗೂ ಸತ್ಯಂ ಬಿಇಡಿ ಕಾಲೇಜ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಡಾ. ಎಚ್ ಎಲ್ ನಾಗೇಗೌಡರ ಕುರಿತು ವಿಶೇಷ ಉಪನ್ಯಾಸ ನೀಡಿದ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆಲಂ ಭಾಷ ಅವರು, ಡಾ.ನಾಗೇಗೌಡರದು ಬಹುಮುಖ ಪ್ರತಿಭೆ. ಉತ್ತಮ ಆಡಳಿತಗಾರರಾಗಿದ್ದ ಅವರು ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಪ್ರತಿಭೆ ಮೆರೆದಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಚಿಗುರು ಕಲಾ ತಂಡದ ಅಧ್ಯಕ್ಷ, ಜಾನಪದ ಯುವ ಗಾಯಕ ಹುಲುಗಪ್ಪ ಎಸ್. ಎಂ., ಕುರುಗೋಡು ತಾಲೂಕು ಘಟಕದ ನೂತನ ಅಧ್ಯಕ್ಷ ಚಾನಾಳ್ ಅಮರೇಶಪ್ಪ ಮಾತನಾಡಿದರು.
ಜಾನಪದ ಗಾಯನ: ಹುಲುಗಪ್ಪ ಎಸ್.ಎಂ ಅವರ ಜಾನಪದ ಗಾಯನ ಗಣ್ಯ ಅತಿಥಿಗಳು, ಸಭಿಕರ ಮನ ಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಪರಿಷತ್ತು ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಆರ್ ಚೇತನ ಕುಮಾರ್, ಖಜಾಂಚಿ ಸುರೇಶ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ. ಗಾದಿಲಿಂಗಪ್ಪ, ಸಹಾಯಕ ಪ್ರಾಧ್ಯಾಪಕರಾದ ಎಂ ವಿ ಜಯದೇವಯ್ಯ, ಎನ್. ಶ್ರೀಕಾಂತ ಮುನಿ, ನಾಗೇಶಬಾಬು, ನಾಗರಾಜ ರಾವ್, ರೆಡ್ಡಿ ಹಳ್ಳಿ ಗಿರಿಜಾ, ಆರ್ ಚಂದ್ರಶೇಖರ್, ಮಲ್ಲಿಕಾರ್ಜುನ, ಚಂದ್ರಶೇಖರ್ ನಾಯ್ಡು, ಸುಲೋಚನಾ
ಮತ್ತಿತರರು ಹಾಗೂ ಬೋಧಕೇತರರ ಸಿಬ್ಬಂದಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಹಾಗೂ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ವಿ.ರಾಮಾಂಜಿನೇಯ (ಅಶ್ವರಾಮು) ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಪರಿಚಯಿಸಿದರು.
ಪ್ರಶಿಕ್ಷಣಾರ್ಥಿಗಳಾದ ಗೌತಮಿ ಕೆ ಎಚ್, ಪ್ರೇಮಲತಾ ಪ್ರಾರ್ಥಿಸಿದರು. ಪ್ರಶಿಕ್ಷಣಾರ್ಥಿ ವೀಣಾಕುಮಾರಿ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಪ್ರಸಾದ್ ಪಿ ಮಾಲಗಿತ್ತಿ ಮಠ, ಸುನೀಲ್ ಕುಮಾರ್ ಟಿ.ಎಂ ನಿರೂಪಿಸಿದರು.
ಪ್ರಶಿಕ್ಷಣಾರ್ಥಿ ಅನ್ನಪೂರ್ಣ ವಂದಿಸಿದರು.
*****