- ಬಳ್ಳಾರಿ, ಸೆ. 24: ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ (ಜನತಾಬಜಾರ್)ವನ್ನು `ಗ್ರಾಹಕ ಸ್ನೇಹಿ’ ಚಟುವಟಿಕೆಗಳ ಕೇಂದ್ರವನ್ನಾಗಿಸಲು ಶ್ರಮಿಸುತ್ತಿರುವುದಾಗಿ ಜನತಾಬಜಾರ್ ಅಧ್ಯಕ್ಷ ಜಿ. ನೀಲಕಂಠಪ್ಪ ಅವರು ತಿಳಿಸಿದರು.
- ಬಿಡಿಎಎ ಸಭಾಂಗಣದಲ್ಲಿ ಶನಿವಾರ ನಡೆದ ವಾರ್ಷಿಕ ಮಹಾಜನಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳಿಗೆ ಸ್ಟೇಷನರಿಗಳನ್ನು ಈಗಾಗಲೇ ಪೂರೈಕೆ ಮಾಡಲಾಗುತ್ತಿದೆ. ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ದೈನಂದಿನ ದಿನಸಿಗಳು, ಆಹಾರ ಧಾನ್ಯಗಳು ಸಿಗುವಂತೆ ಮಾಡಲು ಜನತಾ ಬಜಾರ್ ಆಡಳಿತ ಮಂಡಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಪರಿಣಿತ ಸದಸ್ಯ ಜಿ. ವೀರಶೇಖರರೆಡ್ಡಿ ಅವರು, ಸಂಘದ ಆರ್ಥಿಕ ಚುಟವಟಿಕೆಗಳನ್ನು ಚುರುಕುಗೊಳಿಸಲು ಸಂಘದ ಎಲ್ಲಾ ನಿರ್ದೇಶಕರು ಉತ್ಸುಕರಾಗಿದ್ದು, ಮುಂದಿನ ದಿನಗಳಲ್ಲಿ ಸೂಪರ್ ಬಜಾರ್ ಪ್ರಾರಂಭಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
ಬಿಸಿಸಿ ಡಬ್ಲ್ಯೂಸ್ಟೋರ್ಸ್‍ನ ಪ್ರಧಾನ ವ್ಯವಸ್ಥಾಪಕ, ಸಹಕಾರ ಸಂಘಗಳ ಸಹಾಯಕ ಅಧಿಕಾರಿ ಜಿ.ಎಂ. ವೀರಭದ್ರಯ್ಯ ಅವರು ಮಾತನಾಡಿ, ಸಂಘದ ಸರ್ವ ಸದಸ್ಯರು ಜನತಾಬಜಾರ್‍ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಹಕಾರಿ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.
ಹಂದ್ಯಾಳ್ ಶೃತಿ ಮತ್ತು ತಂಡದ ಸದಸ್ಯರು ಪ್ರಾರ್ಥನೆ ಸಲ್ಲಿಸಿ, ನಾಡಗೀತೆ ಮತ್ತು ರೈತಗೀತೆ ಹಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ನಸೀಮಾ ಬೇಗಂ, ನಿರ್ದೇಶಕರಾದ ಎಸ್. ಮುಜಾಹಿದ್ ಅಲಿ, ಪಿ. ಕವಿತಾ, ಬಿ. ದಾನರೆಡ್ಡಿ, ಸಿ. ಗುರು ಪ್ರಸಾದ್ ರೆಡ್ಡಿ, ವಿ. ಪ್ರದೀಪ್ ರೆಡ್ಡಿ, ಕೆ. ಭರಮರೆಡ್ಡಿ, ಹಲಕುಂದಿ ವಿಜಯಕುಮಾರ್, ಕೆ.ಎಂ. ಕೇದಾರ್‍ನಾಥ್, ಕೆ. ವೇಮಣ್ಣ, ಕೋರಿ ಚನ್ನಬಸಪ್ಪ (ಕೆಎಂಪಿ ಪುಟ್ಟುಸ್ವಾಮಿ), ಎಂ. ನರೇಶ್ ಕುಮಾರ್, ಪಲ್ಲೇದ ಮೈತ್ರಿ, ಸಹಕಾರ ಇಲಾಖೆಯ ಹಿರಿಯ ಅಧಿಕಾರಿ ಕೇಸರಿಮಠ್ ಅವರು ಇದ್ದರು.
ನಿರ್ದೇಶಕಿ ಎಂ. ಕಾತ್ಯಾಯಿನಿ ಮರಿದೇವಯ್ಯ ಅವರು ಸ್ವಾಗತಿಸಿದರು. ನಿರ್ದೇಶಕ ವೆಂಕಟೇಶ್ ಹೆಗಡೆ ಅವರು ಜನತಾ ಬಜಾರ್ ಹುಟ್ಟು-ಬೆಳವಣಿಗೆ ಕುರಿತು ಪ್ರಾಸ್ತಾವಿಕ ವಾಗಿ ಮಾತನಾಡಿದರು. ನಿರ್ದೇಶಕ ಎಚ್.ಎಂ. ಮಹೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಕೆ. ವೆಂಕಟಸ್ವಾಮಿ ಅವರು ವಂದಿಸಿದರು.
*****